ಬೆಂಗಳೂರು(ಜೂ.01): ರಾಜ್ಯ ಸರ್ಕಾರವು ಜೂ.1ರಿಂದ ಅನ್ವಯವಾಗುವಂತೆ ಕ್ವಾರಂಟೈನ್‌ ಮಾರ್ಗಸೂಚಿಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಮಹಾರಾಷ್ಟ್ರ ಹೊರತು ಪಡಿಸಿ ಯಾವುದೇ ರಾಜ್ಯದಿಂದ ವಾಪಸಾಗುವವರಿಗೂ ಕರ್ನಾಟಕದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ ಹೊರತುಪಡಿಸಿ ಹೈರಿಸ್ಕ್‌ ರಾಜ್ಯಗಳ ಪಟ್ಟಿಯಲ್ಲಿರುವ ಗುಜರಾತ್‌, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸೇರಿ ದೇಶದ ಯಾವುದೇ ರಾಜ್ಯದಿಂದ ಆಗಮಿಸುವ ಅಂತಾರಾಜ್ಯ ಪ್ರಯಾಣಿಕರಿಗೆ ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್‌ ಇಲ್ಲ. ಬದಲಿಗೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುವುದು.

ಕ್ವಾರಂಟೈನ್‌ ಮುಗಿಸಿ ಮನೆಗೆ ಹೋಗಿದ್ದ 13 ಮಂದಿಗೆ ಸೋಂಕು

ಆದರೆ ಹೋಂ ಕ್ವಾರಂಟೈನ್‌ ಸುರಕ್ಷಿತವಲ್ಲ ಎಂದು ಭಾವಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಬೇಕು. ಕಡಿಮೆ ವಿಸ್ತೀರ್ಣದ ಮನೆಯಿದ್ದು ಹೆಚ್ಚು ಮಂದಿ ವಾಸವಿದ್ದರೆ (ಇಕ್ಕಟ್ಟಿನ ಮನೆ), ಜನದಟ್ಟಣೆ ಅಥವಾ ಕೊಳಗೇರಿ ಪ್ರದೇಶದಲ್ಲಿರುವವರಿಗೆ ಹೋಂ ಕ್ವಾರಂಟೈನ್‌ ಇರುವುದಿಲ್ಲ. ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲೇ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ರಾಜ್ಯಕ್ಕೆ ವ್ಯಾಪಾರ, ಟೆಂಡರ್‌ ಪ್ರಕ್ರಿಯೆ ಮತ್ತಿತರ ವೃತ್ತಿಪರ ಕಾರ್ಯಗಳಿಗೆ ಬಂದು ಹೋಗುವ ಉದ್ಯಮಿಗಳು ಮತ್ತಿತರರಿಗೆ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ, 7 ದಿನಗಳ ಒಳಗಾಗಿ ರಾಜ್ಯದಿಂದ ವಾಪಸು ಹೋಗುವ ಕುರಿತು ರೈಲು ಅಥವಾ ವಿಮಾನದ ರಿಟರ್ನ್‌ ಟಿಕೆಟ್‌ ಹೊಂದಿರಬೇಕು. ರಾಜ್ಯದಲ್ಲಿ ಉಳಿಯಲಿರುವವರು ಸ್ಥಳೀಯ ವಿಳಾಸದ ದಾಖಲೆ ನೀಡಬೇಕು ಎಂದು ಹೇಳಿದೆ.

ಭಾನುವಾರ ಪ್ರಕಟಿಸಿರುವ ಅನ್‌ಲಾಕ್‌-1 ಕ್ವಾರಂಟೈನ್‌ ಮಾರ್ಗಸೂಚಿ ಪ್ರಕಾರ, ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ‘ಸೇವಾ ಸಿಂಧು’ ವೆಬ್‌ಸೈಟ್‌ನಲ್ಲಿ ಅರ್ಜಿ ಹಾಕಿ ಅರ್ಜಿ ಅಂಗೀಕೃತವಾಗಿ ಅನುಮತಿ ದೊರೆತ ಬಳಿಕವೇ ರಾಜ್ಯಕ್ಕೆ ಆಗಮಿಸಬೇಕು.

ರಾಜ್ಯಕ್ಕೆ ಆಗಮಿಸುವವರಿಗೆ ಗಡಿ ಚೆಕ್‌ಪೋಸ್ಟ್‌, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಬಸ್ಸು ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ರೋಗ ಲಕ್ಷಣಗಳು ಇಲ್ಲದಿದ್ದರೆ ಹೋಂ ಕ್ವಾರಂಟೈನ್‌ ಮುದ್ರೆ ಒತ್ತಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಕಳುಹಿಸಬೇಕು.

ಮಸ್ಕಿ: ನೆಗೆಟಿವ್‌ ರಿಪೋರ್ಟ್‌, 51 ಮಂದಿ ಕ್ವಾರಂಟೈನ್‌ನಿಂದ ಬಿಡುಗಡೆ

ಪ್ರಾಥಮಿಕ ತಪಾಸಣೆ ವೇಳೆ ಸೋಂಕು ಲಕ್ಷಣಗಳಿದ್ದರೆ ಮಾತ್ರ 7 ದಿನಗಳ ಕಾಲ ಕೊರೋನಾ ಐಸೊಲೇಷನ್‌ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಈ ವೇಳೆ ಸೋಂಕು ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಕೊರೋನಾ ನಿಗದಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ನೆಗೆಟಿವ್‌ ಬಂದರೆ ಹೋಂ ಕ್ವಾರಂಟೈನ್‌ಗೆ ಕಳುಹಿಸಬೇಕು ಎಂದು ಹೇಳಲಾಗಿದೆ.

ಮಹಾರಾಷ್ಟ್ರಕ್ಕೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌:

ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಮಾತ್ರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ನಿಯಮ ಮುಂದುವರೆಸಲಾಗಿದೆ. ವಿಮಾನ, ರೈಲು ಅಥವಾ ರಸ್ತೆ ಮೂಲಕ ಬರುವವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ 7 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು.

ಮಹಾರಾಷ್ಟ್ರದಿಂದ ಆಗಮಿಸಿದ್ದರೂ ಐದು ವರ್ಗದ ಜನರಿಗೆ ಹಾಗೂ ಅವರೊಂದಿಗಿನ ಒಬ್ಬ ಸಹಾಯಕರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಮನೆಯಲ್ಲಿ ಸಾವು ಸಂಭವಿಸಿದ್ದರೆ, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ಹಾಗೂ 60 ವರ್ಷ ಮೇಲ್ಪಟ್ಟವೃದ್ಧರು, ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸುವುದಿಲ್ಲ. ಬದಲಿಗೆ ಹೋಂ ಕ್ವಾರಂಟೈನ್‌ ವಿಧಿಸಿ ಮುದ್ರೆ ಒತ್ತಲಾಗುವುದು.

ಇನ್ನು ಮಹಾರಾಷ್ಟ್ರದಿಂದ ಆಗಮಿಸುವ ಉದ್ಯಮಿಗಳು, ವೃತ್ತಿಪರರು ಐಸಿಎಂಆರ್‌ನಿಂದ ಅಂಗೀಕೃತವಾಗಿರುವ ಪ್ರಯೋಗಾಲಯಗಳಿಂದ ಕೊರೋನಾ ಪರೀಕ್ಷೆ ಮಾಡಿಸಿದ (2 ದಿನದ ಒಳಗಿನ ವರದಿ) ನೆಗೆಟಿವ್‌ ವರದಿಯನ್ನು ಸಲ್ಲಿಸಿದರೆ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುವುದು.

ಪರೀಕ್ಷಾ ವರದಿ ಇಲ್ಲದಿದ್ದರೆ ಹೊಸದಾಗಿ ಸೋಂಕು ಪರೀಕ್ಷೆ ಮಾಡಿಸಿ ಪರೀಕ್ಷಾ ವರದಿ ಬರುವವರೆಗೆ ಸರ್ಕಾರ ನಿಗದಿಪಡಿಸಿರುವ ಹೋಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು. ಈ ವೇಳೆ ಪರೀಕ್ಷಾ ವರದಿ ನೆಗೆಟಿವ್‌ ಬಂದರೆ ಅವರನ್ನು ಬಿಡುಗಡೆ ಮಾಡಲಾಗುವುದು. ಇವರೂ ಸಹ 7 ದಿನದೊಳಗಾಗಿ ವಾಪಸು ಹೋಗುವ ಕುರಿತು ರೈಲು ಅಥವಾ ವಿಮಾನದ ರಿಟರ್ನ್‌ ಟಿಕೇಟ್‌ ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಕೊರೋನಾ ಕಾಟ: ಯಾದಗಿರಿ ವ್ಯಕ್ತಿಯ ರಿಪೋರ್ಟ್‌ನಲ್ಲಿ ಗೊಂದಲವೋ ಗೊಂದಲ !

ಹೋಂ ಕ್ವಾರಂಟೈನಿಗಳ ಕೈಗೆ ಸೀಲ್‌

ಹೋಂ ಕ್ವಾರಂಟೈನ್‌ನಲ್ಲಿರುವವರ ಕೈ ಮೇಲೆ ಮುದ್ರೆ ಹಾಗೂ ಮನೆ ಮೇಲೆ ಪೋಸ್ಟರ್‌ ಅಂಟಿಸಲಾಗುವುದು. ಕ್ವಾರಂಟೈನ್‌ ಆ್ಯಪ್‌ ಮೂಲಕ ನಿಗಾ ವಹಿಸಲಾಗುವುದು. ಒಂದು ವೇಳೆ ಹೋಂ ಕ್ವಾರಂಟೈನ್‌ ನಿಯಮಾವಳಿ ಉಲ್ಲಂಘಿಸಿದರೆ ಎಫ್‌ಐಆರ್‌ ದಾಖಲಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗುವುದು. ಇವರ ಬಗ್ಗೆ ನಿಗಾ ಇಡಲು ಪ್ರತಿ ಹಳ್ಳಿಯಲ್ಲಿ 3 ಮಂದಿ ಸದಸ್ಯರನ್ನು ಮಾನಿಟರ್‌ ಮಾಡಲು ನೇಮಿಸಬೇಕು. ಗ್ರಾಮ ಪಂಚಾಯ್ತಿ ಟಾಸ್ಕ್‌ಫೋರ್ಸ್‌ಗೆ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಹೇಳಲಾಗಿದೆ.