ಉಡುಪಿ(ಮೇ 31): ಹೊರ ರಾಜ್ಯ - ದೇಶಗಳಿಂದ ಬಂದು ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕೋವಿಡ್‌ ಪರೀಕ್ಷೆಯ ವರದಿ ಬರುವುದಕ್ಕೆ ಮೊದಲೇ ಬಿಡುಗಡೆಯಾಗಿ ಮನೆಗೆ ಹೋಗಿದ್ದ 13 ಮಂದಿಗೆ ಕೊರೋನಾ ಸೋಂಕಿರುವುದು ಶನಿವಾರ ದೃಢಪಟ್ಟಿದೆ. ಇದರಿಂದ ಅವರ ಮನೆಯವರೂ ಇದೀಗ ಕೊರೋನಾ ಶಂಕಿತರಾಗಿದ್ದಾರೆ.

ಈ 13 ಸೋಂಕಿತರಲ್ಲಿ 12 ಮಂದಿ ಮಹಾರಾಷ್ಟ್ರದಿಂದ ಬಂದರಾದರೇ, ಒಬ್ಬರು ತೆಲಂಗಾಣದಿಂದ ಬಂದವರು. ಅವರಲ್ಲಿ 10 ಮಂದಿ ಪುರುಷರು, 2 ಮಂದಿ ಮಹಿಳೆ ಮತ್ತು 2 ವರ್ಷದ ಬಾಲಕಿಯೂ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯ ಕೊರೋನಾ ಸೋಂಕಿತರ ಸಂಖ್ಯೆ 177ಕ್ಕೆ ಏರಿದೆ.

ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ 45 ಜನ ಬಿಡುಗಡೆ

ಈ ಸೋಂಕಿತರೆಲ್ಲರನ್ನು ಮನೆಯಿಂದ ಕರೆ ತಂದು ಕೋವಿಡ್‌ ಆಸ್ಪತ್ರೆಗೆ ದಾಖಲಿಸ​ಲಾ​ಗಿದೆ. ಅವರ ಸಂಪರ್ಕಕ್ಕೆ ಬಂದ ಮನೆಯವರನ್ನೂ ಪರೀಕ್ಷೆಗೊಳಪಡಿಸಲು ನಿರ್ಧರಿಸಲಾಗಿದೆ.

5, 920 ವರದಿ ಬಾಕಿ

ಶನಿವಾರ ಕೊರೋನಾ ಹಾಟ್‌ ಸ್ಪಾಟ್‌ ನಿಂದ ಬಂದ 32 ಮಂದಿಯ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರೊಂದಿಗೆ 5920 ವರದಿಗಳು ಕೈ ಸೇರುವುದಕ್ಕೆ ಬಾಕಿಯಾಗಿವೆ.

ಶನಿವಾರ 131 ವರದಿಗಳು ಆರೋಗ್ಯ ಇಲಾಖೆಯ ಕೈಸೇರಿದ್ದು, ಅವುಗಳಲ್ಲಿ 13 ವರದಿಗಳು ಪಾಸಿಟಿವ್‌ ಆಗಿದ್ದರೇ, ಉಳಿದವರು ನೆಗೆಟಿವ್‌ ಆಗಿವೆ. ಕ್ವಾರಂಟೈನಲ್ಲಿದ್ದ 8197 ಮಂದಿಯಲ್ಲಿ ಬಹುತೇಕ ಮಂದಿಯನ್ನು ಮನೆಗೆ ಕಳುಹಿಸಲಾಗಿದ್ದು, ಇದೀಗ 7 ದಿನ ಪೂರೈಸದ ಕೇವಲ 134 ಮಂದಿ ಮಾತ್ರ ಸರ್ಕಾರಿ ಕ್ವಾರಂಟೈನ್‌ ನಲ್ಲಿದ್ದಾರೆ. 67 ಮಂದಿ ಹಾಸ್ಟಿಟಲ್‌ ಕ್ವಾರಂಟೈನ್‌ ಮತ್ತು 64 ಮಂದಿ ಐಸೋಲೇಶನ್‌ ವಾರ್ಡಿನಲ್ಲಿದ್ದಾರೆ.

52 ಮಂದಿ ಬಿಡುಗಡೆ

ಜಿಲ್ಲೆಯಲ್ಲಿ ಒಟ್ಟು 177 ಮಂದಿ ಕೊರೋನಾ ಸೋಂಕಿತರಲ್ಲಿ ಇದುವರೆಗೆ 52 ಮಂದಿ ಗುಣಮುಕ್ತರಾಗಿದ್ದು ಅವರನ್ನು ಮನೆಗೆ ಕಳುಹಿಸಲಾಗಿದೆ. ಇದೀಗ 125 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ.

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

ಮಾಚ್‌ರ್‍ ತಿಂಗಳಲ್ಲಿ ಪತ್ತೆಯಾದ 3 ಮಂದಿ ಮತ್ತು ಶನಿವಾರ 4 ಮಂದಿ ಪೊಲೀಸ್‌ ಸಿಬ್ಬಂದಿ ಮತ್ತು 45 ಮಂದಿ ಇತರ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇವತ್ತು ಇನ್ನೂ ಸಾಕಷ್ಟುಮಂದಿ ಬಿಡುಗಡೆಯಾಗಲಿದ್ದಾರೆ.