ಮಸ್ಕಿ(ಮೇ.30): ಕೋವಿಡ್‌-19 ಭೀತಿಯಿಂದ ಮುಂಜಾಗೃತೆ ಕ್ರಮ ಕೈಗೊಳ್ಳುವುದಕ್ಕಾಗಿ ಹೊರ ರಾಜ್ಯಗಳಿಂದ ಬಂದಿರುವವರನ್ನು ಪಟ್ಟಣದ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಿ, ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಲಾಗಿತ್ತು. ಅವರ ಕ್ವಾರಂಟೈನ್‌ ಅವಧಿ ಮುಗಿದಿದ್ದು, ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ 51 ಜನರನ್ನು ತಾಲೂಕು ಆಡಳಿತದಿಂದ ಗುರುವಾರ ಬಿಡುಗಡೆ ಮಾಡಲಾಗಿದೆ.

ಮಸ್ಕಿ ತಾಲೂಕಿಗೆ ಹೊರ ರಾಜ್ಯಗಳಿಂದ ಬಂದಿರುವ 334 ವಲಸೆ ಕಾರ್ಮಿಕರು ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದಾರೆ. ಅದರಲ್ಲಿ ಮೊದಲನೆ ಹಂತದಲ್ಲಿ ಬಂದಿರುವ 51 ಕಾರ್ಮಿಕರನ್ನು ತಪಾಸಣೆ ನಡೆಸಿ ಬಿಡುಗಡೆಗೊಳಿಸಿದರು.
ಆದರೆ ಮುದುಗಲ್‌ ರಸ್ತೆಯ ಹತ್ತಿರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು ಕಳೆದ 20 ದಿನಗಳು ಪೂರ್ಣಗೊಂಡಿದ್ದು, ನಮ್ಮನ್ನು ಮನೆಗೆ ಕಳಿಸುವಂತೆ ಊಟ ಮಾಡದೆ ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ. 

ಇಂದು 248 ಪಾಸಿಟೀವ್ ಕೇಸ್; ಯಾದಗಿರಿ, ರಾಯಚೂರಿನಲ್ಲಿ ಕೊರೊನಾ ಸ್ಫೋಟ

ನಂತರ ತಹಸೀಲ್ದಾರ ಬಲರಾಮ ಕಟ್ಟಿಮನಿ ಹಾಗೂ ಸಿಪಿಐ ದೀಪಕ್‌ ಬೂಸರಡ್ಡಿ, ಡಾ.ನಾಗರಾಜ ಚೌಶಟ್ಟಿ, ಪಿಎಸ್‌ಐ ಸಣ್ಣ ವೀರೇಶ ಕ್ವಾರಂಟೈನ್‌ ಕೇಂದ್ರಕ್ಕೆ ತೆರಳಿ ಕ್ವಾರಂಟೈನ್‌ ಕೇಂದ್ರದಲ್ಲಿರುವ ಕಾರ್ಮಿಕರಿಗೆ ದ್ವನಿವರ್ಧಕದ ಮೂಲಕ ಮನವೊಲಿಸಿ ಊಟ ಮಾಡಲು ಹೇಳಿದರು.

ಆದರೆ ಕಾರ್ಮಿಕರು ನಮ್ಮನ್ನು ಈ ಹಿಂದೆ ಪರೀಕ್ಷೆ ನಡೆಸಿದ್ದೀರಿ, ನಮ್ಮ ಕ್ವಾರಂಟೈನ್‌ ಅವಧಿ ಸಹ ಮುಗಿಸಿದ್ದೇವೆ. ನಮಗೆ ಕ್ವಾರಂಟೈನ್‌ ಕೇಂದ್ರದಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿಕೊಂಡರು. ಇಲ್ಲಿನ ಕೇಂದ್ರದಲ್ಲಿ ಇಬ್ಬರಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಅಂತಿಮ ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ. ನಿಮಗೆ ಆದಷ್ಟು ಬೇಗ ಮನೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮನವೊಲಿಸಿ ಕಾರ್ಮಿಕರಿಗೆ ಕೋವಿಡ್‌ ತಪಾಸಣೆ ನಡೆಸಿದರು.