ಬಡವರ ಮನೆ ಹಣ ಪಡೆದಿದ್ದರೆ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ಕಿಡಿಕಾರಿದ್ದಾರೆ. ಬಿಜೆಪಿಯವರು ಬಡವರಿಗೆ ಒಂದು ಮನೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿ, ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ.

ಬೆಂಗಳೂರು (ಜೂ.24): ಬಡವರ ಮನೆ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ, ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ತಿಲ್ಲ. ಆದ್ರೆ ಈ ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದ್ರೆ ನನ್ನ ಮಕ್ಕಳಿಗೆ ಶಾಪ ತಟ್ಟಲಿ ಎಂದು ಸಚಿವ ಜಮೀರ್ ಅಹ್ಮದ್ ಬಿಜೆಪಿಯವರ ಆರೋಪಗಳಿಗೆ ತೀವ್ರವಾಗಿ ಕಿಡಿಕಾರಿದರು.

ಬಿಜೆಪಿಯವರು ಬಡವರಿಗೆ ಮನೆ ಕೊಟ್ಟಿದ್ದಾರಾ?

ವಸತಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿಯವರು ಒಂದು ಮನೆಯನ್ನಾದರೂ ಬಡವರಿಗೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದಾರೆಂದು ಅವರು ಸಾಬೀತು ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ತನಿಖೆಗೆ ಆದೇಶ:

ನಾನು ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇನೆ. ಆದರೆ, ಇವತ್ತು ಬಿಜೆಪಿಯವರು ಬಡವರ ಬಗ್ಗೆ ಮಾತನಾಡುತ್ತಿದ್ದಾರೆ. ಬಡವರ ಮೇಲೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ತಮ್ಮ ಇಲಾಖೆಯ ಮೇಲಿನ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು.

ಯಾರ ಬಳಿಯೂ ದುಡ್ಡು ಪಡೆದಿಲ್ಲ:

ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದಿದ್ದರೆ, ನನ್ನ ಮಕ್ಕಳಿಗೆ ಶಾಪ ತಟ್ಟಲಿ. ಭ್ರಷ್ಟಾಚಾರದಲ್ಲಿ ನನ್ನ ಕೈವಾಡ ಇದ್ದರೆ, ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ. ಬಿಜೆಪಿಯವರು ಏನೂ ಹೇಳಬೇಕಿಲ್ಲ, ನಾನೇ ರಾಜೀನಾಮೆ ಕೊಡುತ್ತೇನೆ ಎಂದರು.

ಯಾರ ಬಳಿಯೂ ನಾವು ದುಡ್ಡು ಪಡೆದು ಹಣ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ ಎಲ್ಲ ಬಡವರಿಗೆ ಮನೆ ಕೊಟ್ಟಿದ್ದೇವೆ. ಯರ ಬಳಿ ಹಣ ಕೇಳಿದ್ದೇವಾ ಹೋಗಿ ಕೇಳಲಿ. ದುಡ್ಡು ಪಡೆದು ಮನೆ ಕೊಟ್ಟಿದ್ರೆ ನಾವು ಹುಳು ಬಿದ್ದು ಸಾಯ್ತೇವೆ. ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯದು ಆಗುತ್ತಾ? ಎಂದು ಪ್ರಶ್ನಿಸಿದ ಸಚಿವ ಜಮೀರ್, ಯಾರು ಹಣ ಪಡೆದಿದ್ದಾರೆ ಅವರ ಹೆಸರು ಹೇಳಲಿ, ಅವರ ಮೇಲೆ ಕ್ರಮ ಜರುಗಿಸೋಣ ಎಂದು ಬಿಆರ್ ಪಾಟೀಲ್‌ಗೆ ಸವಾಲು ಹಾಕಿದರು.

ಯಾವ ಪಂಚಾಯ್ತಿಯವರು ದುಡ್ಡು ಕೇಳಿದ್ರು? ಪಂಚಾಯ್ತಿ ಭ್ರಷ್ಟಾಚಾರ ನಮಗೆ ಹೇಗೆ ಗೊತ್ತಾಗುತ್ತೆ? ಯಾರಾದ್ರೂ ಹಣ ಕೇಳಿದ್ರೆ ಅವರ ಹೆಸರು ಹೇಳಬೇಕು ಅಲ್ವ ಅವರ ಕ್ಷೇತ್ರದ ಪಂಚಾಯತಿ ಬಗ್ಗೆ ಪಾಟೀಲ್ ಅವರೇ ಹೇಳಬೇಕು. ಯಾರು ದುಡ್ಡು ಪಡೆದು ಮನೆ ಕೊಟ್ಟಿದ್ದಾರೆ ಅಂತ ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಬೇಕಾದ್ರೆ ಸಿಎಂ ಅವರಿಗೆ ಪತ್ರ ಬರೆಯಲಿ, ಸಿಬಿಐ ತನಿಖೆ ಆಗಬೇಕಾ? ಅದನೂ ಆಗಲಿ ಎಂದರು.