Asianet Suvarna News Asianet Suvarna News

ವಿವಾಹಿತ ಹೆಣ್ಮಕ್ಕಳಿಗೆ ಗುಡ್‌ ನ್ಯೂಸ್: ಕೋರ್ಟ್ ಮಹತ್ವದ ಆದೇಶ!

ವಿವಾಹಿತ ಪುತ್ರಿಗೂ ತಂದೆಯ ಅನುಕಂಪದ ನೌಕರಿ| ಇಷ್ಟು ದಿನ ಪತ್ನಿ, ಪುತ್ರ ಅಥವಾ ಅವಿವಾಹಿತ ಪುತ್ರಿ ಮಾತ್ರ ಅರ್ಹರಾಗಿದ್ದರು| ಸರ್ಕಾರದ ನೀತಿ ಲಿಂಗ ತಾರತಮ್ಯದಿಂದ ಕೂಡಿದೆ: ಹೈಕೋರ್ಟ್‌ ತೀರ್ಪು

Karnataka High Court says denying a job on compassionate grounds to a married daughter violates right to equality pod
Author
Bangalore, First Published Dec 17, 2020, 7:28 AM IST

ಬೆಂಗಳೂರು(ಡಿ.17): ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿ ಸಹ ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ವಿವಾಹವಾದ ಕಾರಣಕ್ಕೆ ಅನುಕಂಪದ ಉದ್ಯೋಗ ನೀಡಲು ನಿರಾಕರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಭುವನೇಶ್ವರಿ ವಿ.ಪುರಾಣಿಕ್‌ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಶಾಲಾ ಮಕ್ಕಳಿಗೆ ಭರ್ಜರಿ ಆಫರ್ : ಇನ್ಮುಂದೆ ಸಿಗುತ್ತೆ ತೊಗರಿಬೇಳೆ, ಎಣ್ಣೆ, ಉಪ್ಪು

ಈವರೆಗೂ ಪತ್ನಿ, ಪುತ್ರ ಅಥವಾ ಅವಿವಾಹಿತ ಪುತ್ರಿ ಅನುಕಂಪದ ಉದ್ಯೋಗವನ್ನು ಕೋರಬಹುದಾಗಿತ್ತು. ವಿವಾಹಿತ ಪುತ್ರಿ ಅನುಕಂಪದ ನೌಕರಿಗೆ ಅವಕಾಶವಿರಲಿಲ್ಲ. ಹೈಕೋರ್ಟ್‌ನ ಈ ಆದೇಶದಿಂದ ವಿವಾಹಿತ ಪುತ್ರಿಯೂ ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿರುತ್ತಾರೆ.

ಪುತ್ರನಂತೆಯೇ ಪುತ್ರಿಯೂ ವಿವಾಹವಾದರೂ ಪುತ್ರಿಯೇ ಆಗಿರುತ್ತಾಳೆ. ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅರ್ಹಳಲ್ಲ ಎಂಬ ಸರ್ಕಾರದ ನಿಯಮ ಲಿಂಗ ತಾರತಮ್ಯ ಮಾಡುತ್ತದೆ. ಲಿಂಗ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಪುತ್ರನ ವೈವಾಹಿಕ ಸ್ಥಾನಮಾನ ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿರುವಾಗ, ವಿವಾಹಿತ ಮಗಳು ಸಹ ಅನುಕಂಪದ ಉದ್ಯೋಗವನ್ನು ಕೋರಲು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

ಪುತ್ರಿ ಮದುವೆ ಆದ ಮಾತ್ರಕ್ಕೆ ಆಕೆ ಕುಟುಂಬದಿಂದ ಹೊರತಾಗಿರುವುದಿಲ್ಲ. ವಿವಾಹಿತ ಪುತ್ರ ಮಾತ್ರ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆಂದು ಯಾವುದೇ ಕಾನೂನು ಊಹಿಸಲು ಸಾಧ್ಯವಿಲ್ಲ. ಮದುವೆ ಆಧಾರದ ಮೇಲೆ ಅನುಕಂಪದ ಉದ್ಯೋಗ ನಿರಾಕರಿಸಲು ಆಗುವುದಿಲ್ಲ. ಸರ್ಕಾರಿ ಉದ್ಯೋಗಿಯ ಪುತ್ರಿಯ ವಿವಾಹ ಪೋಷಕರ ಸಾಮಾಜಿಕ ಬದ್ಧತೆಯಾಗಿರುತ್ತದೆ. ಆ ಸಾಮಾಜಿಕ ಬದ್ಧತೆಯೇ ಅನುಕಂಪದ ಉದ್ಯೋಗ ಕೋರಲು ಪುತ್ರಿಯನ್ನು ಅನರ್ಹ ಮಾಡುತ್ತದೆ ಎಂದರೆ ಒಪ್ಪಲಾಗದು. ಹೀಗಾಗಿ, ವಿವಾಹಿತ ಪುತ್ರಿಯನ್ನು ಹೊರಗಿಟ್ಟು ‘ಕುಟುಂಬ’ವನ್ನು ಅರ್ಥೈಸುವ ಮತ್ತು ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅನರ್ಹಳು ಎಂದು ಪ್ರತಿಪಾದಿಸುವ ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ಪರಿಚ್ಛೇದ 14 ಮತ್ತು 15 ಅನ್ನು ಉಲ್ಲಂಘಿಸುತ್ತದೆ ಎಂದು ಆದೇಶಿಸಿತು.

ಕಾರ್ಮಿಕರಿಂದ ಮಲಗುಂಡಿ ಸ್ವಚ್ಛತೆ ಕಟ್ಟುನಿಟ್ಟಾಗಿ ನಿಷೇಧಿಸಿ

ಬೆಳಗಾವಿಯ ಕುಡಚಿ ಪ್ರಕರಣ:

ಅಶೋಕ್‌ ಅಡಿವೆಪ್ಪ ಮಡಿವಾಳ್‌ ಎಂಬುವರು ಬೆಳಗಾವಿ ಜಿಲ್ಲೆಯ ಕುಡಚಿ ಗ್ರಾಮದ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿದ್ದರು. ಕುಟುಂಬದ ನಿರ್ವಹಣೆಗೆ ಆಧಾರವಾಗಿದ್ದ ಅವರು ಸಾವನ್ನಪ್ಪಿದ್ದರು. ಇದರಿಂದ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಕೋರಿ ಮೃತರ ಪುತ್ರಿ ಭುವನೇಶ್ವರಿ ವಿ.ಪುರಾಣಿಕ್‌ 2017ರ ಮೇ 22ರಂದು ಮನವಿ ಪತ್ರ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿದ್ದ ಕೃಷಿ ಮಾರುಕಟ್ಟೆಇಲಾಖೆ ಜಂಟಿ ನಿರ್ದೇಶಕರು, ವಿವಾಹ ಆಗಿರುವುದರಿಂದ ಅನುಕಂಪದ ಉದ್ಯೋಗ ನೀಡಲಾಗದು ಎಂದು ತಿಳಿಸಿ 2017ರ ಆ.8ರಂದು ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಭುವನೇಶ್ವರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ಅನ್ನು ಅಕ್ರಮ ಮತ್ತು ಅಸಂವಿಧಾನಿಕ ಎಂದು ಘೋಷಿಸಿತು. ಜತೆಗೆ, ಈ ನಿಯಮಗಳಲ್ಲಿ ಅವಿವಾಹಿತ ಎಂಬ ಪದವನ್ನು ರದ್ದುಪಡಿಸುವುದರ ಜೊತೆಗೆ ಅನುಕಂಪದ ಉದ್ಯೋಗಕ್ಕಾಗಿ ಅರ್ಜಿದಾರರ ಕ್ಲೇಮನ್ನು ಮತ್ತೆ ಪರಿಗಣಿಸಬೇಕು. ಮರು ಪರಿಗಣಿಸಿದ ನಂತರ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಒಂದು ತಿಂಗಳಲ್ಲಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

Follow Us:
Download App:
  • android
  • ios