ದೇಗುಲ ಭೇಟಿ: ವಿಜಯೇಂದ್ರ ವಿರುದ್ಧ ಕಾನೂನು ಕ್ರಮಕ್ಕೆ ಹೈಕೋರ್ಟ್ ಸೂಚನೆ
* ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶನ
* ಪ್ರಾಥಮಿಕ ತನಿಖಾ ವರದಿ ನ್ಯಾಯಪೀಠಕ್ಕೆ ಸಲ್ಲಿಕೆ
* ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ
ಬೆಂಗಳೂರು(ಜೂ.19): ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ದೇಗುಲದಲ್ಲಿ ಸಿಎಂ ಪುತ್ರ ವಿಜಯೇಂದ್ರ ಪೂಜೆ ನೆರವೇರಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಾಗಿ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋೕರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.
ನಾಯಕತ್ವ ಬದಲಾವಣೆ ಕೂಗು ಬೆನ್ನಲ್ಲೇ ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ
ಪ್ರಕರಣದ ಕುರಿತು ಜಿಲ್ಲಾಧಿಕಾರಿ ನಡೆಸಿರುವ ಪ್ರಾಥಮಿಕ ತನಿಖಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಯಿತು. ಈ ವೇಳೆ ಅಡ್ವೋಕೆಟ್ ಜನರಲ್ ಮಾತನಾಡಿ, ನಂಜನಗೂಡು ದೇವಸ್ಥಾನವನ್ನು ವಿಜಯೇಂದ್ರ ಪ್ರವೇಶಿಸಿದ್ದರು. ಆದರೆ, ವಿಶೇಷ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ ಎಂದರು. ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠವು ನಿರ್ಬಂಧ ಇದ್ದರೂ ಜನರು ದೇವಾಲಯಕ್ಕೆ ಹೋಗಬಹುದೇ? ಎಂದು ಪ್ರಶ್ನಿಸಿತು. ಜತೆಗೆ, ನಿರ್ಬಂಧ ಮೀರಿ ದೇವಾಸ್ಥಾನ ಪ್ರವೇಶ ಮಾಡಿದವರ ವಿರುದ್ಧ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.