ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ಬೆಂಗಳೂರು‌ (ಏ.23) ತುಮಕೂರು ನಗರದ ಹೊರವಲಯದಲ್ಲಿ ಇರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ‘ಕಾಂಗ್ರೆಸ್ ಭವನ ಟ್ರಸ್ಟ್’ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂಬ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಎನ್.ಎನ್. ಗೋಪಾಲಕೃಷ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿ ಸಂಬಂಧ ಕೆಲ‌ಕಾಲ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ, ನಗರ ಅಭಿವೃದ್ಧಿ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಮತ್ತು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೋಟಿಸ್‌ ನೀಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಆಕ್ಷೇಪಣೆ ಏನು?:

ತುಮಕೂರು ಹೋಬಳಿಯ ಮಾರಲೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿರುವ ಸುಮಾರು 4 ಎಕರೆ ಜಮೀನನ್ನು 1942ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ (ನಗರದ ಕಸ ವಿಲೇವಾರಿಗಾಗಿ) ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಈ ಜಮೀನಿನ ಪೈಕಿ 2 ಎಕರೆ ಪ್ರದೇಶವನ್ನು ‘ಕಾಂಗ್ರೆಸ್ ಭವನ ಟ್ರಸ್ಟ್’ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ.

₹17 ಲಕ್ಷ ಅಷ್ಟೇ ಪಾವತಿ:

ಮಾರುಕಟ್ಟೆ ದರದ ಪ್ರಕಾರ ಈ ಜಮೀನಿನ ಮೌಲ್ಯ ಸುಮಾರು ₹23 ಕೋಟಿ ಆಗಿದ್ದರೂ, ಸರ್ಕಾರ ಇದನ್ನು ಕೇವಲ ₹17 ಲಕ್ಷ (ಮಾರ್ಗದರ್ಶಿ ದರದ ಶೇ.5ರಷ್ಟು) ನೀಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ತಿಳಿಸಲಾಗಿದೆ.