ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ, ಬಯಸಿದ ಖಾತೆ ಸಿಗದ ಕಾರಣಕ್ಕೆ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದು ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇದು ಸೂಚಿಸಿದೆ ಎಂದರು.
ಚಿಕ್ಕಮಗಳೂರು (ಜೂ.5): ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ನೇತೃತ್ವದ ಸರ್ಕಾರ ರಚನೆಯಾದ ಆರಂಭದಲ್ಲೇ ಬಿಗ್ ಶಾಕ್ ಎದುರಾಗಿದೆ. ತಾವು ಬಯಸಿದ್ದ ಖಾತೆ ಸಿಗದ್ದಕ್ಕೆ ಬೇಸರಗೊಂಡು ಆಪ್ತರ ಮನವೊಲಿಕೆ ನಡುವೆಯೂ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ:
ಡಿಕೆ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿಯವರು ರಾಜೀನಾಮೆ ನೀಡಿದ್ದಾರೆ. ಮೊದಲ ಸಂಪುಟ ಸಭೆಯಲ್ಲೇ ಸಿಕ್ಸರ್ ಹೊಡೆದ ಡಿಕೆ ಶಿವಕುಮಾರ್ ಎಂದು ಬಿಂಬಿಸಿದ್ದರು. ಸಿಕ್ಸರ್ ಏನೋ ಹೊಡೆದ್ರು ಆದರೀಗ ವಿಕೆಟ್ ಬಿದ್ದಿದೆ. ಇದರರ್ಥ ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಸೂಚಿಸಿದೆ. ರಾಜೀನಾಮೆ ಕೇವಲ ಊಹಾಪೋಹ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದವರು ಈಗ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಉತ್ತಮ ಆಡಳಿತ ಕೊಡಬಲ್ಲರೇ?
ಹೊಸ ಸರ್ಕಾರ ರಚನೆಯಾಗಿ ಎರಡೇ ದಿನದಲ್ಲಿ ಹಿರಿಯ ಸಚಿವರೊಬ್ಬರು ರಾಜೀನಾಮೆ ಕೊಟ್ಟಿದ್ದಾರೆ ಇದು ಭವಿಷ್ಯ ಆಡಳಿತ ಹೇಗಿರಬಹುದು ಅನ್ನೋದು ಸೂಚಿಸುತ್ತೆ. ನಮಗೆ ಆತಂಕ ಇರೋದು ರಾಜೀನಾಮೆ ವಿಚಾರವಾಗಿ ಅಲ್ಲ, ಇದು ಆಡಳಿತದ ಮೇಲೆ ಬೀರುವ ಕೆಟ್ಟ ಪರಿಣಾಮಗಳಿಗಾಗಿ. ಹಿರಿಯ ನಾಯಕರಲ್ಲೇ ಅಪಸ್ವರ ಪ್ರಾರಂಭವಾಗಿ, ತಾಳಮೇಳ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತೋ ಅದರ ಪರಿಣಾಮ ಆಡಳಿತದ ಮೇಲಾಗುತ್ತೆ. ಕೊನೆಗೆ ಇದರ ದುಷ್ಪರಿಣಾಮ ಜನಜೀವನದ ಮೇಲಾಗಿ, ಯಾರ ಮಾತನ್ನ ಯಾರೂ ಕೇಳದ ಸ್ಥಿತಿಗೆ ಬಂದು ತಲುಪುತ್ತಾರೆ. ಈ ಹಿಂದೆ ಮೂರು ವರ್ಷಗಳ ಕಾಲ ಅವರ ಆಡಳಿತ ಹೇಗಿತ್ತು ಎಂಬುದು ರಾಜ್ಯದ ನೋಡಿದ್ದಾರೆ. ಅನುಭವಿಸಿದ್ದಾರೆ. ಈಗ ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಆರಂಭದಲ್ಲೇ ಇಂಥ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನ ಸಂಬಾಳಿಸಿಕೊಂಡು ಭ್ರಷ್ಟಾಚಾರ ಮುಕ್ತವಾಗಿ ಉತ್ತಮ ಆಡಳಿತ ಕೊಡಲು ಡಿಕೆ ಶಿವಕುಮಾರ್ ಅವರಿಗೆ ಸಾಧ್ಯವಾ? ಎಂದು ಪ್ರಶ್ನಿಸಿದರು
ಕೊಟ್ಟ ಮಾತು ತಪ್ಪಿದರಾ ಸಿಎಂ ಡಿಕೆ ಶಿವಕುಮಾರ್?
ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾ ರೆಡ್ಡಿ, ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಬಯಸಿದ ಖಾತೆ ಸಿಗದೇ ಬೇಸರಗೊಂಡಿದ್ದರು. ಈ ವೇಳೆ ಡಿಕೆ ಶಿವಕುಮಾರ್ 'ನಮ್ಮ ಸರ್ಕಾರ ರಚನೆಯಾದಾಗ ಬೆಂಗಳೂರು ನಗರಾಭಿವೃದ್ಧಿ ಹೊಣೆ ನಿಮಗೆ' ಎಂದು ಭರವಸೆ ನೀಡಿದ್ದಾರೆಂದು ರಾಜಕೀಯ ವಲದಲ್ಲಿ ಮಾತು ಕೇಳಿಬಂದಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರಚನೆಯಾದಾಗ ರಾಮಲಿಂಗಾ ರೆಡ್ಡಿ ಅವರು ನಗರಾಭಿವೃದ್ಧಿ ಖಾತೆ ಸಿಗುತ್ತದೆಂದು ನಿರೀಕ್ಷಿಸಿದ್ದರು. ಆದರೆ ಆ ಖಾತೆ ಕೈ ತಪ್ಪಿದ್ದರಿಂದ ನೊಂದು ಮನವೊಲಿಕೆ ನಡುವೆಯೂ ರಾಜೀನಾಮೆ ನೀಡಿರುವುದು ಡಿಕೆ ಶಿವಕುಮಾರ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.


