ಡಿಕೆ ಶಿವಕುಮಾರ್‌ಗೆ ಖಾತೆ ಹಂಚಿಕೆ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಆಹಾರ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಮುನಿಸಾಗಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಮುನಿಯಪ್ಪ ಇದೀಗ ಬೇರೆ ಖಾತೆಗೆ ಪಟ್ಟು ಹಿಡಿದಿದ್ದಾರೆ. 

ಬೆಂಗಳೂರು (ಜೂ.05) ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಇದೀಗ ಖಾತೆ ಹಂಚಿಕೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡಿಕೆ ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕೋಲಾಹಲ ಶುರುವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮುನಿಸು ತೀವ್ರಗೊಂಡಿದೆ. ಇದೀಗ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಖಾತೆಗೆ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಬೇರೆ ಖಾತೆ ನೀಡುವಂತೆ ಹೈಕಮಾಂಡ್‌ಗೆ ಸೂಚಿಸಿದ್ದಾರೆ. ಇದು ಕಾಂಗ್ರೆಸ್ ಹೊಸ ಕ್ಯಾಬಿನೆಟ್‌ನಲ್ಲಿ ತೀವ್ರ ತಳಮಳ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಪಕ್ಷದಲ್ಲಿ ಹಿರಿಯನಿದ್ದೇನೆ

ರಾಮಲಿಂಗಾರೆಡ್ಡಿ ಬಳಿಕ ಈಗ ಕೆ ಎಚ್ ಮುನಿಯಪ್ಪನ ಸರದಿ ಶುರುವಾಗಿದೆ. ನನಗೆ ಬೇರೆ ಖಾತೆ ನೀಡಬೇಕು ಎಂದು ಕೆಹೆಚ್ ಮುನಿಯಪ್ಪ ಹೇಳಿದ್ದಾರೆ. ನನಗೆ ಬೇರೆ ಖಾತೆ ನೀಡಬೇಕು. ನಾನು ಕಾಂಗ್ರೆಸ್ ಪಕ್ಷದಲ್ಲಿ ಸೀನಿಯರ್ ಇದ್ದೇನೆ . ಏಳು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ . ನನಗೆ ಬೇರೆ ಖಾತೆ ನೀಡುವಂತೆ ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನನ್ನ ಪಕ್ಷ ನಿಷ್ಠೆ ಹೈಕಮಾಂಡ್ ಗೆ ಗೊತ್ತಿದೆ. ರಾಹುಲ್ ಗಾಂಧಿಯವರು ತಾಯಿ ಸ್ಥಾನದಲ್ಲಿದ್ದಾರೆ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ದೇವನಹಳ್ಳಿಯಲ್ಲಿ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಮುಂದೆ ಸಾಗಬೇಕು. ಈ ವಿಚಾರವನ್ನು ನಾನು ಹೈಕಮಾಂಡ್ ಮುಂದೆ ಇಟ್ಟಿದ್ದೇನೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡೋಣ ಎಂದು ಮುನಿಯಪ್ಪ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹೇಳಿದ್ದಾರೆ.

ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ್ದೇನೆ. ನನ್ನ ಪಕ್ಷ ನಿಷ್ಠೆ ಹೈಕಮಾಂಡ್‌ಗೆ ಗೊತ್ತಿದೆ ಎಂದು ಮುನಿಯಪ್ಪ ಹೇಳಿದ್ದಾರೆ. ಇದೇ ವೇಳೆ ಮುನಿಯಪ್ಪ ಬೆಂಬಲಿಗರು, ಕಾಂಗ್ರೆಸ್ ಹಿರಿಯ ಕಾರ್ಯಕರ್ತು ಕೆಹೆಚ್ ಮುನಿಯಪ್ಪಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಪ್ರತ್ರಿಕ್ರಿಯಿಸಿದ ಮುನಿಯಪ್ಪ, ಈ ವಿಚಾರಗಳು ಹೈಕಮಾಂಡ್ ಮುಂದಿಟ್ಟಿದ್ದೇನೆ ಎಂದಿದ್ದಾರೆ.

ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಭುಗಿಲೆದ್ದ ಅಸಮಾಧಾನ

ಡಿಕೆ ಶಿವಕುಮಾರ್ ಸಂಪುಟ ಸೇರಿಕೊಂಡ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಆದರೆ ಹಿರಿಯರು ಖಾತೆಯಿಂದ ಅಸಮಾಧಾನಗೊಂಡಿದ್ದಾರೆ. ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಭರವಸೆ ನೀಡಿ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಇದರಿಂದ ತೀವ್ರ ಬೇಸರಗೊಂಡ ರಾಮಲಿಂಗಾ ರೆಡ್ಡಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಮಲಿಂಗಾ ರೆಡ್ಡಿ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸುವುದಾಗಿ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.