ಹದಿಮೂರು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಮಹಿಳೆಯೊಬ್ಬರ ಬೆಂಗಳೂರಿನ ನಿವಾಸದ ವಿಳಾಸ ನೀಡಿ ಖರೀದಿಸಿದ ಸಿಮ್‌ ಕಾರ್ಡ್‌ ಉಪಯೋಗಿಸಿ ಅಂತರ್ಜಾಲದಲ್ಲಿ ಅಪ್ರಾಪ್ತರ ನಗ್ನ ವಿಡಿಯೋ ಅಪ್ಲೋಡ್‌ ಮಾಡಿದ ಪ್ರಕರಣ ಸಂಬಂಧ ಮಹಿಳೆ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಿರಾಕರಿಸಿದೆ. 

ಬೆಂಗಳೂರು (ಡಿ.23): ಹದಿಮೂರು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಮಹಿಳೆಯೊಬ್ಬರ ಬೆಂಗಳೂರಿನ ನಿವಾಸದ ವಿಳಾಸ ನೀಡಿ ಖರೀದಿಸಿದ ಸಿಮ್‌ ಕಾರ್ಡ್‌ ಉಪಯೋಗಿಸಿ ಅಂತರ್ಜಾಲದಲ್ಲಿ ಅಪ್ರಾಪ್ತರ ನಗ್ನ ವಿಡಿಯೋ ಅಪ್ಲೋಡ್‌ ಮಾಡಿದ ಪ್ರಕರಣ ಸಂಬಂಧ ಮಹಿಳೆ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಪಡಿಸಲು ಕೋರಿ ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಹಾಜೀರಾ ಆಸ್ಮಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ಪೀಠ ಆದೇಶಿಸಿದೆ.

ಅರ್ಜಿದಾರರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಯಾದ ಕಾರಣ ಪ್ರಕರಣದಲ್ಲಿ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆಯೇ ಅಪರಾಧಿ ಎಂದಲ್ಲ. ಅವರು ಶಂಕಿತ ಆರೋಪಿಯಷ್ಟೇ. ಕೃತ್ಯಕ್ಕೆ ಬಳಕೆಯಾದ ಸಿಮ್‌ ಕಾರ್ಡ್‌ ಅನ್ನು ಅರ್ಜಿದಾರರೇ ಖರೀದಿಸಿದ್ದರೇ ಅಥವಾ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಮೊಹಮ್ಮದ್‌ ತಾಹಾ, ಅರ್ಜಿದಾರರ ಫೋಟೋ ಹಾಗೂ ಹೆಸರು ದುರ್ಬಳಕೆ ಮಾಡಿಕೊಂಡು ಸಿಮ್‌ ಖರೀದಿಸಿದ್ದಾನೆಯೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ತಿಳಿಸಿದೆ.

ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ಪರಿಹಾರಕ್ಕೆ ಅರ್ಹ: ಹೈಕೋರ್ಟ್‌

ಅದರಂತೆ ಅರ್ಜಿದಾರರ ತನಿಖಾಧಿಕಾರಿಯ ಮುಂದೆ ಹಾಜರಾಗುವುದು ಅಗತ್ಯವಿದೆ. ತಾವು ಯಾವುದೇ ಸಿಮ್‌ ಖರೀದಿಸಿಲ್ಲ, ತಮ್ಮ ಹೆಸರಿನಲ್ಲಿ ಮತ್ತೊಬ್ಬರು ಖರೀದಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ತನಿಖಾಧಿಕಾರಿಯ ಮುಂದೆ ದೃಢಪಡಿಸಿದರೆ, ಅವರ ಹೆಸರನ್ನು ತೆಗೆದುಹಾಕಿ ಸಿಮ್‌ ಖರೀದಿಸಿದ ವ್ಯಕ್ತಿಗಳ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ಹಂತದಲ್ಲಿ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ತಿಳಿಸಿದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿದೆ.

ಅಂತರ್ಜಾಲದಲ್ಲಿ ಅಪ್ರಾಪ್ತರ ನಗ್ನ ವಿಡಿಯೋ ಅಪ್ಲೋಡ್‌ ಮಾಡಿದ ಪ್ರಕರಣವೊಂದರ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಸಿಇಎನ್‌ ಪೊಲೀಸರು 2021ರ ಜ.16ರಂದು ಎಫ್‌ಐಆರ್‌ ದಾಖಲಿಸಿದ್ದರು. ಮೊಬೈಲ್‌ ಸೇವೆ ಒದಗಿಸುವ ಸಂಸ್ಥೆಯಿಂದ ಮಾಹಿತಿ ಪಡೆದ ಪೊಲೀಸರಿಗೆ ಹಾಜೀರಾ ಆಸ್ಮಾ ಅವರ ಬೆಂಗಳೂರಿನ ವಿಳಾಸ ನೀಡಿ ಖರೀದಿಸಿದ್ದ ಸಿಮ್‌ ಬಳಸಿ ವಿಡಿಯೋ ಅಪ್ಲೋಡ್‌ ಮಾಡಿರುವ ವಿಚಾರ ತಿಳಿದಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಮೊಹಮ್ಮದ್‌ ತಾಹಾ ಎಂಬಾತನನ್ನು ಶಂಕಿತ ಆರೋಪಿಯಾಗಿ ಗುರುತಿಸಿದ್ದರು. ಆತ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ. ಪ್ರಕರಣವಿನ್ನೂ ತನಿಖಾ ಹಂತದಲ್ಲಿರುವಾಗಲೇ ಹಾಜೀರಾ ಎಫ್‌ಐಆರ್‌ ರದ್ದುಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್‌

ಅರ್ಜಿದಾರರು ಪರ ವಕೀಲರು ವಾದ ಮಂಡಿಸಿ, ಹಾಜೀರಾ ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಬೆಂಗಳೂರಿನ ಮನೆಯ ವಿಳಾಸ ನೀಡಿ ಸಿಮ್‌ ಖರೀದಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರ ಹೆಸರಿನಲ್ಲಿ ಮತ್ತಾರೋ ಸಿಮ್‌ ಖರೀದಿಸಿದ್ದರೆ ಅದಕ್ಕೆ ಅರ್ಜಿದಾರರು ಜವಾಬ್ದಾರರಲ್ಲ. ಅವರ ವಿರುದ್ಧದ ತನಿಖೆ ಮುಂದುವರಿಸಿದರೆ ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದ್ದು, ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿದ್ದರು.