ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಪದೇ ಪದೇ ಕಾಲಾವಕಾಶ ಕೋರುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ 5 ಲಕ್ಷ ರು. ದಂಡ ವಿಧಿಸಿದೆ.
ಬೆಂಗಳೂರು (ಡಿ.15): ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಪದೇ ಪದೇ ಕಾಲಾವಕಾಶ ಕೋರುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ 5 ಲಕ್ಷ ರು. ದಂಡ ವಿಧಿಸಿದೆ. ಅರ್ಜಿ ಸಲ್ಲಿಕೆಯಾಗಿ 1 ವರ್ಷ ಕಳೆದಿದ್ದು, ಈವರೆಗೆ 3ನೇ ಬಾರಿ ಕಾಲಾವಕಾಶ ಕೋರಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಪಾಲಿಸಬೇಕು ಎಂಬ ಉದ್ದೇಶವಿಲ್ಲ. ನಮ್ಮ ಆದೇಶಗಳೆಂದರೆ ಅಲಂಕಾರಿಕ ಪೇಪರ್‌ಗಳೆಂದು ಸರ್ಕಾರ ಭಾವಿಸಿ ಹಲವಾರು ಬಾರಿ ಕಾಲಾವಕಾಶ ಕೋರುತ್ತಿದೆ ಎಂದು ನ್ಯಾಯಪೀಠ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ರಾಜ್ಯದಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು, ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ ರಚಿಸಲು ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸುತ್ತಿದ್ದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠದ ಮುಂದೆ, ಸರ್ಕಾರದ ಪರ ವಕೀಲರು ಹಾಜರಾಗಿ ಮತ್ತೆ 12 ವಾರ ಕಾಲಾವಕಾಶ ಕೇಳಿದರು. ಆದರೆ ಸರ್ಕಾರದ ಈ ನಡೆಗೆ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.
ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್ ತಡೆ
ಒಂದಿಂಚೂ ಕೆಲಸ ಮಾಡಿಲ್ಲ: ಈ ಹಿಂದಿನ ವಿಚಾರಣೆ ವೇಳೆ ಅಡ್ವೋಕೆಟ್ ಜನರಲ್ ಹಾಜರಾಗಿ 12 ವಾರ ಕಾಲಾವಕಾಶ ಕೋರಿದ್ದಾರೆ. ಅವರ ಮನವಿಯ ಮೇಲೆ ಭರವಸೆಯಿಟ್ಟು ನ್ಯಾಯಾಲಯ ಕಾಲಾವಕಾಶ ನೀಡಿದೆ. ಆದರೂ, ಈವರೆಗೂ ಒಂದಿಂಚೂ ಕೆಲಸ ಮಾಡಿಲ್ಲ. ಇದು ಕೊನೆಕಾಣದ ಪ್ರಕ್ರಿಯೆಯಾಗಿ ಬಿಟ್ಟಿದೆ. ಅರ್ಜಿಗೆ ದಾಖಲೆಗಳನ್ನು ಸೇರಿಸಲಾಗುತ್ತಿದ್ದು, ಮತ್ತೆ ಮತ್ತೆ ಕಾಲಾವಕಾಶ ಕೋರಲಾಗುತ್ತಿದೆ ಎಂದು ನ್ಯಾಯಪೀಠ ಕಿಡಿ ಕಾರಿತು. ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು 2023ರ ಜನವರಿ 28ರ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು, ಅರ್ಜಿಯನ್ನು ತಿದ್ದುಪಡಿ ಮಾಡಿ ಕ್ಷೇತ್ರ ಮರು ವಿಂಗಡಣೆ ಆಯೋಗವನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.
ಇನ್ನೂ ಹೆಚ್ಚು ದಂಡ ಹಾಕಬೇಕಿತ್ತು: ದಂಡ ವಿಧಿಸಬೇಡಿ ಎಂದು ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ಈ ಕ್ರಮಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗಿತ್ತು. ಆದರೆ, ಇದು ಅತ್ಯಂತ ಕನಿಷ್ಠ ಮೊತ್ತವಾಗಿದೆ ಎಂದು ಹೇಳಿದರು. ದಂಡದ ಮೊತ್ತದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘಕ್ಕೆ ತಲಾ 2 ಲಕ್ಷ ರು. ಮತ್ತು ವಕೀಲರ ಗುಮಾಸ್ತರ ಸಂಘಕ್ಕೆ ತಲಾ 1 ಲಕ್ಷ ರು.ಪಾವತಿಸಲು ಸರ್ಕಾರಕ್ಕೆ ಸೂಚನೆ ನೀಡಿತು.
ಪತ್ನಿ ಶೀಲ ಶಂಕಿಸಿ 2ನೇ ಸಲ ಮಗುವಿನ ಡಿಎನ್‌ಎ ಟೆಸ್ಟ್ ಕೋರಿದ್ದ ಅರ್ಜಿ ವಜಾ
ಇದೇ ವೇಳೆ ಕ್ಷೇತ್ರ ಮರು ವಿಂಗಡಣೆ ಆಯೋಗದ ಪರ ವಕೀಲರು ಹಾಜರಾಗಿ ತಮ್ಮನ್ನು ಪ್ರತಿವಾದಿಯನ್ನಾಗಿಸಬೇಕು ಮತ್ತು ಕ್ಷೇತ್ರ ಪುನರ್‌ವಿಂಗಡಣಾ ಕಾರ್ಯ ಪೂರ್ಣಗೊಳಿಸಲು ಮೂರು ತಿಂಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಮಾಡಿಕೊಂಡ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಈ ವೇಳೆ ಚುನಾವಣಾ ಆಯೋಗದ ಪರ ವಕೀಲರು ವಾದ ಮಂಡಿಸಿ, ರಾಜ್ಯಲ್ಲಿ ಹೊಸದಾಗಿ ಎರಡು ತಾಲೂಕುಗಳು ರಚನೆಯಾಗಿವೆ. ಇದರಿಂದ ಕ್ಷೇತ್ರ ಪುನರ್‌ವಿಂಗಡಣಾ ನಿಯಮಗಳ ತಿದ್ದುಪಡಿ ಮಾಡಬೇಕಾಗಿದೆ ಎಂದರು.