ಬೈಕ್ ಟ್ಯಾಕ್ಸಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ. ಜೂನ್ 16ರಿಂದ ರಾಪಿಡೋ, ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸಬೇಕಾಗಿದೆ. ನಾಸ್ಕಾಮ್ ಸರ್ಕಾರಕ್ಕೆ ನಿಯಂತ್ರಣ ನೀತಿ ರೂಪಿಸಲು ಒತ್ತಾಯಿಸಿದೆ.

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಟಾಕ್ಸಿ ಸೇವಾ ಪೂರೈಕೆದಾರರಾದ ರಾಪಿಡೋ, ಓಲಾ ಮತ್ತು ಉಬರ್‌ ಅವರು ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಮತ್ತೆ ಸ್ಪಷ್ಟಪಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಮೂಲವೊಂದು ಮಾಹಿತಿ ನೀಡಿ, "ಬೈಕ್ ಟ್ಯಾಕ್ಸಿಗಳು ಕಾನೂನುಬಾಹಿರವಾಗಿವೆ ಎಂಬುದು ಸರ್ಕಾರದ ನಿಲುವು. ಹೈಕೋರ್ಟ್ ಕೂಡ ಅದನ್ನೇ ಒಪ್ಪಿಕೊಂಡಿದೆ. ಈಗ, ವಿಭಾಗೀಯ ಪೀಠವು ಈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದು, ನಿಯಮಬದ್ಧತೆ ಇಲ್ಲದ ಸೇವೆಯನ್ನು ಮುಂದುವರಿಯಲಾಗದು." ಎಂದಿದ್ದಾರೆ

ನಿಯಂತ್ರಣ ನೀತಿ ರೂಪುರೇಷೆ, ನಿಯಮಗಳು ಇಲ್ಲದೆ, ಬೈಕ್‌ ಸೇವೆ ಹಲವು ವರ್ಷಗಳಿಂದ ವಿವಾದದ ಮಧ್ಯೆಯೇ ಸಾಗುತ್ತಿದ್ದು, ಕೋವಿಡ್‌ ಸಾಂಕ್ರಾಮಿಕ ರೋಗದ ನಂತರ ಈ ಸೇವೆಗೆ ಡಿಮಾಂಡ್ ಹೆಚ್ಚಾಯ್ತು. ಆಟೋರಿಕ್ಷಾ ಒಕ್ಕೂಟಗಳು ಮೊದಲಿನಿಂದಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. 2021ರಲ್ಲಿ ಸರ್ಕಾರ ಇ-ಬೈಕ್ ಟ್ಯಾಕ್ಸಿಗಳ ಕುರಿತು ನಿಯಮಗಳನ್ನು ಪರಿಚಯಿಸಿತು. ಆದರೆ, ಸುರಕ್ಷತೆ, ದುರುಪಯೋಗದ ಸಾಧ್ಯತೆ ಮುಂತಾದ ಕಾರಣಗಳಿಂದಾಗಿ 2023ರಲ್ಲಿ ಆ ನೀತಿಯನ್ನು ಹಿಂದಕ್ಕೆ ಪಡೆದಿತು.

ನಿಯಮ ರೂಪಿಸಿ, ಸೇವೆ ಪುನರಾರಂಭಕ್ಕೆ ಅವಕಾಶ ನೀಡುವಂತೆ ನಾಸ್ಕಾಮ್ ಒತ್ತಾಯ

ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ಕಾಮ್), ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಗೆ ಪತ್ರ ಬರೆದು, ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ನಿಯಂತ್ರಣ ನೀತಿ ರೂಪಿಸಲು ತ್ವರಿತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ. "ಬೈಕ್ ಟ್ಯಾಕ್ಸಿಗಳು ಕೈಗೆಟುಕುವ ಮತ್ತು ಪರಿಣಾಮಕಾರಿ ಪ್ರಯಾಣ ಮಾರ್ಗವಾಗಿದ್ದು, ಸಾವಿರಾರು ಪಾರ್ಟ್ ಟೈಮ್ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವಲಸಿಗರಿಗೆ ಜೀವನೋಪಾಯ ನೀಡುತ್ತಿರುವ ಪ್ರಮುಖ ಸೇವೆ. ಇದನ್ನು ಸ್ಥಗಿತಗೊಳಿಸುವುದರಿಂದ ದೊಡ್ಡ ಪ್ರಮಾಣದ ಉದ್ಯೋಗ ಹಾನಿ ಸಂಭವಿಸಬಹುದು." ಅಲ್ಲದೆ, ಜೂನ್ 15ರ ಗಡುವು ವಿಸ್ತರಿಸಿ, ಸಮತೋಲಿತ ಮತ್ತು ದೀರ್ಘಕಾಲೀನ ಪರಿಹಾರಕ್ಕಾಗಿ ಸಮಾಲೋಚನೆ ಪ್ರಕ್ರಿಯೆ ಆರಂಭಿಸಬೇಕೆಂದು ನಾಸ್ಕಾಮ್ ಒತ್ತಾಯಿಸಿದೆ.

ಏನಾಗಬಹುದು?

ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ ಸಾಧ್ಯತೆ.

ಸರ್ಕಾರದಿಂದ ಇನ್ನು ಕಟ್ಟುನಿಟ್ಟಿನ ನಿಯಮ ಇಲ್ಲ.

ನಾಸ್ಕಾಮ್ ಮತ್ತು ಇತರೆ ಸಂಘಟನೆಗಳು ಸಮರ್ಥ ನೀತಿಯ ಅವಶ್ಯಕತೆಯ ಕುರಿತು ಒತ್ತಾಯ

ಟ್ಯಾಕ್ಸಿ ಸೇವೆ ಸ್ಥಗಿತ ನಾನಾ ವರ್ಗದ ಜನರ ಜೀವನೋಪಾಯ ಮತ್ತು ನಗರ ಸಾರಿಗೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.