ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವನ್ನು ಹೈಕೋರ್ಟ್ ಮುಂದುವರೆಸಿದೆ. ಸರ್ಕಾರ ನಿಯಮಾವಳಿ ರೂಪಿಸದ ಕಾರಣ ಮಧ್ಯಂತರ ಅನುಮತಿಯನ್ನು ನಿರಾಕರಿಸಲಾಗಿದೆ. ಜೂನ್ 24 ರಂದು ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.

ಬೆಂಗಳೂರು (ಜೂ. 13): ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಿ ಸೇವೆಗಳಿಗೆ ಹೈಕೋರ್ಟ್ ಮತ್ತೊಂದು ಬಾರಿ ತಡೆಯೊಡ್ಡಿದ್ದು, ಒಲಾ, ಊಬರ್ ಮತ್ತು ರಾಪಿಡೋ ಮಾದರಿಯ ಆಪ್ ಆಧಾರಿತ ಸೇವೆ ನೀಡುವವರಿಗೆ ತೀವ್ರ ಆಘಾತ ನೀಡಿದಂತಾಗಿದೆ. ಈ ಹಿಂದೆ ಮಧ್ಯಂತರ ಆದೇಶದ ಆಧಾರದ ಮೇಲೆ ಚಾಲನೆಯಲ್ಲಿದ್ದ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದವರಿಸಲು ಹೈಕೋರ್ಟ್ ಸ್ಪಷ್ಟವಾಗಿ ಅನುಮತಿ ನಿರಾಕರಿಸಿದೆ.

ಸರಕಾರದ ನಿರ್ಲಕ್ಷ್ಯ:

ರಾಜ್ಯ ಸರ್ಕಾರವು ಈವರೆಗೂ ಬೈಕ್ ಟ್ಯಾಕ್ಸಿಗಳಿಗೆ ಪರ್ಮಿಟ್ ನೀಡುವ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸದ ಹಿನ್ನೆಲೆ, ಹೈಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಡ್ವೊಕೆಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರು, 'ಇದುವರೆಗೆ ರಾಜ್ಯ ಸರ್ಕಾರ ಪರ್ಮಿಟ್ ನೀಡಿಲ್ಲ ಮತ್ತು ನಿರ್ದಿಷ್ಟ ಗೈಡ್‌ಲೈನ್‌ಗಳೇ ಇಲ್ಲ' ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಭಾರತದಲ್ಲಿ ಕೇವಲ 8 ರಾಜ್ಯಗಳು ಮಾತ್ರ ಈ ಸೇವೆಗೆ ನಿಯಮಿತ ಪರ್ಮಿಟ್ ನೀಡಿವೆ. ಆದರೆ ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಈ ಸೇವೆಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ. ಇದರ ವಿರುದ್ಧ ಅನೇಕ ಸಾರ್ವಜನಿಕರು ಮತ್ತು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ.

ಸುಪ್ರೀಂ ಕೋರ್ಟ್ ಕೂಡಾ ಅನುಮತಿಗೆ ನಕಾರ:

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, ಬೈಕ್ ಟ್ಯಾಕ್ಸಿಗಳಿಗೆ ಮಧ್ಯಂತರ ಅನುಮತಿ ನೀಡುವುದನ್ನು ಸುಪ್ರೀಂ ಕೋರ್ಟ್ ಕೂಡಾ ಹಿಂದಿನ ವಿಚಾರಣೆಯಲ್ಲಿ ನಿರಾಕರಿಸಿದ್ದುದನ್ನು ಸರ್ಕಾರದ ಪರ ವಕೀಲರು ಹೈಲೈಟ್ ಮಾಡಿದರು. ಈ ಹಿನ್ನೆಲೆ, ಹೈಕೋರ್ಟ್ ನೂತನ ಮಧ್ಯಂತರ ಅನುಮತಿಯನ್ನು ನಿರಾಕರಿಸಿ, ಮೇಲ್ಮನವಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿದೆ. ಈ ಕುರಿತಾಗಿ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿರುವ ಹೈಕೋರ್ಟ್ ವಿಭಾಗೀಯ ಪೀಠವು, ಮಧ್ಯಂತರ ಆದೇಶ ನೀಡುವುದಕ್ಕೆ ನಿರಾಕರಿಸಿದೆ. ಜೊತೆಗೆ, ಜೂ.24ಕ್ಕೆ ವಿಚಾರಣೆ ಮತ್ತು ತೀರ್ಪನ್ನು ಮುಂದೂಡಿಕೆ ಮಾಡಿದೆ.

ಸಂಕ್ಷಿಪ್ತ ಮುಖ್ಯಾಂಶಗಳು:

  • ಬೈಕ್ ಟ್ಯಾಕ್ಸಿಗೆ ಮಧ್ಯಂತರ ಅನುಮತಿಗೆ ಹೈಕೋರ್ಟ್ ನಕಾರ
  • ಈ ಹಿಂದಿನ ಆದೇಶದಂತೆ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ
  • ರಾಜ್ಯ ಸರ್ಕಾರ ನಿಯಮಾವಳಿ ರೂಪಿಸದೇ ನಿರ್ಲಕ್ಷ್ಯ
  • ಜೂನ್ 24ರಂದು ಅಂತಿಮ ತೀರ್ಪಿಗೆ ನಿರೀಕ್ಷೆ
  • ಬಸ್, ಆಟೋ ಯುನಿಯನ್‌ಗಳಿಂದ ಪ್ರತಿರೋಧ

ನ್ಯಾಯಮೂರ್ತಿ ಬಿ. ಶ್ಯಾಮ್ ಪ್ರಸಾದ್ ಅವರ ಪೀಠವು ಏಪ್ರಿಲ್ 2ರಂದು ಕರ್ನಾಟಕದಲ್ಲಿ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು 6 ವಾರಗಳ ಒಳಗೆ ಸ್ಥಗಿತಗೊಳಿಸಲು ಆದೇಶಿಸಿದ್ದರು. ಈ ವೇಳೆ ಸರ್ಕಾರವು ನೀತಿ ಬದಲಾವಣೆ ಮಾಡಲು ನಿರ್ಧರಿಸದ ಹೊರತು ಮತ್ತು ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸರ್ಕಾರದಿಂದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸದ ಹೊರತು, ಅಂತಹ ವಾಹನಗಳನ್ನು ಓಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ವಿವರಿಸಿತ್ತು. ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾದ 6 ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ರಾಪಿಡೊ, ಓಲಾ ಮತ್ತು ಉಬರ್ ಸೇರಿದಂತೆ ಬಾಧಿತ ಬೈಕ್ ಟ್ಯಾಕ್ಸಿ ನಿರ್ವಾಹಕರು ಈ ಗಡುವನ್ನು ವಿಸ್ತರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಈ ವೇಳೆ ವಿನಂತಿಯನ್ನು ಪರಿಗಣಸಿದ್ದ ನ್ಯಾಯಾಧೀಶರು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಿದ್ದರು.