ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕೃಷ್ಣಾ ನದಿಗೆ 2 ಲಕ್ಷ ಕ್ಯುಸೆಕ್‌ ನೀರಿನ ಒಳಹರಿವಿದೆ.

ಬೆಂಗಳೂರು (ಆ.20): ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಬೆಳಗಾವಿ, ಯಾದಗಿರಿ, ಉತ್ತರ ಕನ್ನಡ, ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಗೋಕಾಕ್‌ನ ಸಂಗಮ ನಗರದಲ್ಲಿ ಮಂಗಳವಾರ ಮಳೆಗೆ ಮನೆ ಬಿದ್ದು, ಫರೀದಾಬಾನು ಶಕೀಲಾ (50) ಮೃತಪಟ್ಟಿದ್ದಾಳೆ. ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಮುಂದುವರಿದಿದೆ. ಕೃಷ್ಣಾ ನದಿಗೆ 2 ಲಕ್ಷ ಕ್ಯುಸೆಕ್‌ ನೀರಿನ ಒಳಹರಿವಿದೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ 14ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, 20ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ 30 ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಪ್ರಮುಖ ನದಿ ಮಾಂಜ್ರಾದಲ್ಲಿ ನೆರೆ ಬಂದಿದೆ. ಬೀದರ್‌ ಜಿಲ್ಲೆಯ ಕಮಲನಗರ ತಾಲೂಕೊಂದರಲ್ಲಿಯೇ 40ಕ್ಕೂ ಹೆಚ್ಚು ಮನೆಗಳು ಕುಸಿದಿವೆ. 50ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. 7 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸುಮಾರು 3 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಲಿಂಗನಮಕ್ಕಿ ಜಲಾಶಯ ಭರ್ತಿಗೆ ಮೂರು ಅಡಿಗಳಷ್ಟು (ಗರಿಷ್ಠ 1819 ಅಡಿ) ಮಾತ್ರ ಬಾಕಿಯಿದೆ. ಹೀಗಾಗಿ, ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆದು, 15 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ರುದ್ರ ರಮಣೀಯವಾಗಿ ಭೋರ್ಗರೆಯುತ್ತಿದೆ. ಶರಾವತಿ ನದಿ ತೀರದಲ್ಲಿ ಸುರಕ್ಷತಾ ಕ್ರಮವಾಗಿ 3 ಕಾಳಜಿ ಕೇಂದ್ರಗಳನ್ನು ತೆರೆದು, 101 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಈ ಜಲಾಶಯ ಭರ್ತಿಯಾಗುತ್ತಿರುವುದು ವಿಶೇಷ.

ತುಂಗಭದ್ರಾ ಜಲಾಶಯದಿಂದ 1.22 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಟ್ಟಿರುವುದರಿಂದ ಹಂಪಿಯ ಹಲವು ಸ್ಮಾರಕಗಳು ಜಲಾವೃತಗೊಂಡಿವೆ. ಹೀಗಾಗಿ, ನದಿ ದಡದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ತುಂಗಭದ್ರಾ ಪ್ರವಾಹದಿಂದಾಗಿ ಹರಿಹರದಲ್ಲಿ ತುಂಗಭದ್ರಾ ನದಿ ಮಧ್ಯದ ಕಲ್ಲಿನ ಮಂಟಪ, ರಾಘವೇಂದ್ರ ಮಠದ ಬಳಿಯ ತುಂಗಭದ್ರಾರತಿ ಮಂಟಪಗಳಿಗೆ ನೀರು ನುಗ್ಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಕದ್ರಾ ಜಲಾಶಯದ 6 ಗೇಟ್‌ಗಳ ಮೂಲಕ 51 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ನೆರೆಯ ನೀರು ಕಾಳಿ ನದಿ ತೀರದಲ್ಲಿ ನುಗ್ಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ತುಂತುರು ಮಳೆಯಾಗಿದ್ದು, ಶೀತಗಾಳಿ ಬೀಸುತ್ತಿದೆ.

ಮನೆ ಕುಸಿತ: ಈ ಮಧ್ಯೆ, ಶಿವಮೊಗ್ಗ ಜಿಲ್ಲೆಯ ರಿಪನ್‌ಪೇಟೆಯಲ್ಲಿ ಮಳೆಗೆ ಸರ್ಕಾರಿ ಶಾಲಾ ಕಟ್ಟಡ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.