ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತವು ಕೆಲವು ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಕಲೇಶಪುರ, ಅರಕಲಗೂಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಾಲೆಗಳು ಬಂದ್ ಆಗಿವೆ.

ಹಾಸನ: ರಾಜ್ಯಾದ್ಯಂತ ವರುಣ ಆರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಅನೇಕ ಹಳ್ಳಿಗಳಲ್ಲಿ ಜನರು ಸಂಚಾರ ಸಮಸ್ಯೆ ಎದುರಿಸುತ್ತಿದ್ದು, ನದಿ-ನಾಲೆಗಳು, ಹೊಳೆಗಳು ತುಂಬಿ ಹರಿಯುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇದರ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಡಳಿತವು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿದೆ.

ಯಾವ ಯಾವ ತಾಲೂಕು ಮತ್ತು ಹೋಬಳಿಗಳಿಗೆ ರಜೆ?

  • ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕುಗಳು – ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ.
  • ಬೇಲೂರು ತಾಲ್ಲೂಕು – ಅರೆಹಳ್ಳಿ ಮತ್ತು ಬಿಕ್ಕೋಡು ಹೋಬಳಿಗಳಲ್ಲಿ ರಜೆ.
  • ಆಲೂರು ತಾಲ್ಲೂಕು – ಕೆ.ಹೊಸಕೋಟೆ ಮತ್ತು ಪಾಳ್ಯ ಹೋಬಳಿಗಳಲ್ಲಿ ರಜೆ.

ಒಟ್ಟು ಎರಡು ತಾಲ್ಲೂಕು ಮತ್ತು ನಾಲ್ಕು ಹೋಬಳಿಗಳ ಶಿಕ್ಷಣ ಸಂಸ್ಥೆಗಳು ಮುಂದಿನ ದಿನಗಳವರೆಗೆ ಮುಚ್ಚಿರಲಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು, ಮಕ್ಕಳ ಸುರಕ್ಷತೆ ಮತ್ತು ಸಂಚಾರದ ತೊಂದರೆಗಳನ್ನು ಮನಗಂಡು ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡುವ ಆದೇಶ ಹೊರಡಿಸಿದ್ದಾರೆ.

ಮಳೆ ಪರಿಣಾಮ ಹಳ್ಳಿಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ, ಜನರು ತೊಂದರೆ ಅನುಭವಿಸುತ್ತಿರುವ ಪರಿಸ್ಥಿತಿ ಮುಂದುವರೆದಿದೆ. ಕೃಷಿ ಬೆಳೆಗಳ ಮೇಲೆ ಮಳೆ ಪರಿಣಾಮ ಬೀರಿದ್ದು, ರೈತರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ ರಾಜ್ಯದ ಬೆಳಗಾವಿ ಜಿಲ್ಲೆಯ 8 ತಾಲೂಕುಗಳಿಗೆ ರಜೆ ಘೋಷಣೆಯಾಗಿದೆ. ದಾವಣಗೆರೆ, ಚಿತ್ರದುರ್ಗ, ಬೀದರ್, ಕೊಡಗು, ಚಿಕ್ಕಮಗಳೂರು, ಧಾರಾವಾಡ, ಉತ್ತರ ಕನ್ನಡದ 11 ತಾಲೂಕುಗಳಿಗೆ ರಜೆ ಘೋಷಣೆಯಾಗಿದೆ.