ಆಂಧ್ರ ಮತ್ತು ತೆಲಂಗಾಣದಲ್ಲಿ ಅಬ್ಬರಿಸಿದ್ದ ಮುರುಸು ಚಂಡಮಾರುತ ದುರ್ಬಲಗೊಂಡಿದ್ದರೂ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ಪ್ರಭಾವದಿಂದ ನವೆಂಬರ್ 4 ರಿಂದ 6 ರವರೆಗೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿಯೂ ಮೋಡಕವಿದ ವಾತಾವರಣವಿದೆ.

ಬೆಂಗಳೂರು (ನ.04): ಆಂಧ್ರಪ್ರದೇಶ ಹಾಗೂ ತೆಲಂಗಾಣ ಕರಾವಳಿಯಲ್ಲಿ ಅಬ್ಬರಿಸಿದ್ದ 'ಮುರುಸು ಚಂಡಮಾರುತ' (Cyclone Murasu) ಇದೀಗ ವಾಯುಭಾರ ಕುಸಿತವಾಗಿ (Depression) ದುರ್ಬಲಗೊಳ್ಳುತ್ತಿದ್ದರೂ, ಅದರ ತೀವ್ರ ಪರಿಣಾಮ ಕರ್ನಾಟಕದ ಮೇಲೂ ಬೀರಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ (ನವೆಂಬರ್ 4 ರಿಂದ 6 ರವರೆಗೆ) ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರ, ಕೊಂಕಣ-ಗೋವಾ ಹಾಗೂ ಲಕ್ಷದ್ವೀಪ ತೀರದಲ್ಲಿ ಮೇಲ್ಮೈ ಸುಳಿಗಾಳಿ ಮುಂದುವರಿದಿರುವುದರಿಂದ ರಾಜ್ಯಾದ್ಯಂತ ಮೋಡಕವಿದ ವಾತಾವರಣದೊಂದಿಗೆ ಮಳೆಯ ಆರ್ಭಟ ಜೋರಾಗಲಿದೆ.

ಯಾವ್ಯಾವ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ?:

ದಕ್ಷಿಣ ಒಳನಾಡು: ನವೆಂಬರ್ 4 ರಂದು ಚಾಮರಾಜನಗರ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ. ನವೆಂಬರ್ 5 ಮತ್ತು 6 ರಂದೂ ಸಹ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಕರ್ನಾಟಕ: ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಇಂದು ಭಾರಿ ಮಳೆಯಾಗಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡು: ಹಾವೇರಿ, ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನ ಹೇಗಿರಲಿದೆ?

ರಾಜಧಾನಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಜೊತೆಗೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಲಿದೆ.

ಮಳೆ ಮತ್ತು ಬಿರುಗಾಳಿಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು, ವಾಹನ ಸವಾರರು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಕೇಂದ್ರದ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.