- Home
- Karnataka Districts
- ಮುರಸು ಚಂಡಮಾರುತ ಎಫೆಕ್ಟ್: ಕೊಡಗಿನಲ್ಲಿ ವರುಣನ ಅಬ್ಬರ; ಕೆರೆಯಂತಾದ ಮಡಿಕೇರಿ ಓಂಕಾರೇಶ್ವರ ದೇಗುಲ ರಸ್ತೆ
ಮುರಸು ಚಂಡಮಾರುತ ಎಫೆಕ್ಟ್: ಕೊಡಗಿನಲ್ಲಿ ವರುಣನ ಅಬ್ಬರ; ಕೆರೆಯಂತಾದ ಮಡಿಕೇರಿ ಓಂಕಾರೇಶ್ವರ ದೇಗುಲ ರಸ್ತೆ
ಮುರಸು ಚಂಡಮಾರುತದ ಪ್ರಭಾವದಿಂದ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಮಡಿಕೇರಿಯ ಓಂಕಾರೇಶ್ವರ ದೇವಾಲಯದ ರಸ್ತೆ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕೊಡಗು (ನ.04): ಬಂಗಾಳಕೊಲ್ಲಿ ಮತ್ತು ಆಂಧ್ರ ಕರಾವಳಿಯಲ್ಲಿ ತೀವ್ರಗೊಂಡಿರುವ 'ಮುರಸು ಚಂಡಮಾರುತ'ದ (Cyclone Murasu) ಪ್ರಭಾವದಿಂದಾಗಿ ಕರ್ನಾಟಕದಲ್ಲೂ ಹವಾಮಾನ ವೈಪರೀತ್ಯ ಉಂಟಾಗಿದ್ದು, ಕಾಫಿನಾಡು ಕೊಡಗಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ ನಗರದಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯಕ್ಷೇತ್ರವಾದ ಓಂಕಾರೇಶ್ವರ ದೇವಾಲಯದ ಮುಂಭಾಗದ ರಸ್ತೆ ಸಂಪೂರ್ಣ ಕೆರೆಯಂತಾಗಿದೆ.
2 ಅಡಿ ನೀರು - ಓಂಕಾರೇಶ್ವರ ರಸ್ತೆ ಬಂದ್, ವಾಹನ ಸವಾರರ ಪರದಾಟ:
ನಿರಂತರವಾಗಿ ಸುರಿದ ಮಳೆಗೆ ಚರಂಡಿಗಳು ಕಸ-ಕಡ್ಡಿಗಳಿಂದ ಬ್ಲಾಕ್ ಆಗಿದ್ದು, ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆಯೇ ಸುಮಾರು 2 ಅಡಿಯಷ್ಟು ಎತ್ತರಕ್ಕೆ ಧುಮ್ಮಿಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ಓಂಕಾರೇಶ್ವರ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಾಗಲಾಗದೆ ತೀವ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಪುರಸಭೆ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಕೊಡಗಿನಲ್ಲಿ ವ್ಯಾಪಕ ಮಳೆ - ಐಎಂಡಿ ವರದಿ:
ಹವಾಮಾನ ಇಲಾಖೆಯ (IMD) ದೈನಂದಿನ ವರದಿಯ ಪ್ರಕಾರ, ಕೊಡಗು ಜಿಲ್ಲೆಯ ಮುರ್ನಾಡುವಿನಲ್ಲಿ 3 ಸೆಂ.ಮೀ, ಭಾಗಮಂಡಲದಲ್ಲಿ 2 ಸೆಂ.ಮೀ ಹಾಗೂ ಅಮ್ಮತ್ತಿಯಲ್ಲಿ 1 ಸೆಂ.ಮೀ ಉತ್ತಮ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರ ಮತ್ತು ಕರಾವಳಿ ತೀರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹಾಗೂ ಮುರುಸು ಚಂಡಮಾರುತ ಉತ್ತರ-ವಾಯವ್ಯ ದಿಕ್ಕಿಗೆ ಚಲಿಸುತ್ತಿರುವುದರಿಂದ ಮಳೆಯ ತೀವ್ರತೆ ಹೆಚ್ಚಾಗಿದೆ.
ಮುಂದಿನ 48 ಗಂಟೆ ಭಾರಿ ಮಳೆ ಎಚ್ಚರಿಕೆ:
ಮುರುಸು ಚಂಡಮಾರುತವು ಕ್ರಮೇಣ ದುರ್ಬಲಗೊಳ್ಳುತ್ತಿದ್ದರೂ, ಅದರ ಪರಿಣಾಮವಾಗಿ ದಕ್ಷಿಣ ಒಳನಾಡಿನಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು ಸಹಿತ ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಬೀಸುವ ಸಾಧ್ಯತೆಯಿದೆ. ವಿಶೇಷವಾಗಿ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ನವೆಂಬರ್ 4 ಮತ್ತು 5 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಿದೆ. ನದಿ ತೀರದ ನಿವಾಸಿಗಳು ಹಾಗೂ ಪ್ರವಾಸಿಗರು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.





