ಜನೌಷಧ ಕೇಂದ್ರಗಳಲ್ಲಿ ಯಾವುದೇ ಖಾಸಗಿ ಕಂಪನಿಯ ಔಷಧಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ‘108 ಆರೋಗ್ಯ ಕವಚ’ ಯೋಜನೆಯಡಿ ಆಂಬುಲೆನ್ಸ್ ಸೇವೆ ಬಲಪಡಿಸುವ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಬೆಂಗಳೂರು (ಜೂ.26): ಜನೌಷಧ ಕೇಂದ್ರಗಳಲ್ಲಿ ಯಾವುದೇ ಖಾಸಗಿ ಕಂಪನಿಯ ಔಷಧಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಜನೌಷಧ ಕೇಂದ್ರದಲ್ಲಿ ಖಾಸಗಿ ಔಷಧ ಮಾರುವಂತಿಲ್ಲ
ಆರೋಗ್ಯ ಇಲಾಖೆಯ ಅಥವಾ ನಿಗದಿತ ಮಾನದಂಡಗಳ ಪ್ರಕಾರವೇ ಕಂಪನಿಗಳು ಔಷಧಗಳನ್ನು ಮಾರಾಟ ಮಾಡಬೇಕು. ಜನೌಷಧ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಔಷಧಗಳು ದೊರೆಯುತ್ತವೆ ಎಂಬ ಕಾರಣಕ್ಕೆ ಬಡವರು, ಮುಗ್ಧರು ಹೋಗುತ್ತಾರೆ. ಆದರೆ, ಇಲ್ಲಿ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಇಲ್ಲದಂತಹ ಔಷಧಗಳನ್ನು ಮಾರಾಟ ಮಾಡಿ ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಆಗಬಾರದು ಎಂದರು. ಇದೇ ವೇಳೆ, ರಾಜ್ಯದಲ್ಲಿ ‘108 ಆರೋಗ್ಯ ಕವಚ’ ಯೋಜನೆಯಡಿ ಆಂಬುಲೆನ್ಸ್ ಸೇವೆ ಬಲಪಡಿಸಲು ಆದ್ಯತೆ ನೀಡಲಾಗಿದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ರಾಷ್ಟ್ರೀಯ ಮಾನದಂಡದ ಪ್ರಕಾರ ಆಂಬ್ಯುಲೆನ್ಸ್ ರೋಗಿಯನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುವ ಸಮಯದ ಮಿತಿ (ಗೋಲ್ಡನ್ ಅವರ್) 20 ನಿಮಿಷವಿದೆ. ವಿವಿಧ ಕಾರಣಗಳಿಂದ ಈ ಸಮಯದ ಮಿತಿಯೊಳಗೆ ರೋಗಿಯನ್ನು ಕರೆದೊಯ್ಯಲು ರಾಜ್ಯದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಈಗ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿ, 10 ನಿಮಿಷಗಳ (ಪ್ಲಾಟಿನಂ ಅವರ್) ಮಿತಿಯನ್ನು ಗೊತ್ತುಪಡಿಸಲಾಗುತ್ತಿದೆ. ಆಂಬ್ಯುಲೆನ್ಸ್ ರೋಗಿಯ ಬಳಿ ತಲುಪಿದ ಬಳಿಕ ತುರ್ತು ಚಿಕಿತ್ಸೆ ಲಭ್ಯವಾಗುತ್ತದೆ ಎಂದರು.
ಶಿಶು ಜನನ ಪ್ರಮಾಣಕ್ಕೂ ಇಲಾಖೆಗೂ ಸಂಬಂಧವಿಲ್ಲ: ಸಚಿವ ಯು.ಟಿ. ಖಾದರ್
ಶಿಶುಗಳ ಜನನ ವಿಷಯಕ್ಕೂ ನಮಗೂ ಸಂಬಂಧವಿಲ್ಲ. ಎಷ್ಟು ಜನ ಹುಟ್ಟುತ್ತಾರೋ ಅಷ್ಟು ಜನರ ಲೆಕ್ಕ ಬರುತ್ತದೆ. ನಾವು ಹೋಗಿ ಮಕ್ಕಳು ಮಾಡಿ ಎನ್ನಲಾಗಲ್ಲ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವ ಯು.ಟಿ. ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
- ಇಲಾಖೆ ನಿಗದಿಪಡಿಸಿದ ಔಷಧ ಅಷ್ಟೇ ಮಾರಾಟ
- ಆರೋಗ್ಯ ಸಚಿವ ಯು.ಟಿ. ಖಾದರ್‌ರಿಂದ ಸ್ಪಷ್ಟನೆ

