ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು ಸರ್ಕಾರ ಕಾನೂನುಬಾಹಿರ ಕ್ರಮ ಕೈಗೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು/ ಹುಬ್ಬಳ್ಳಿ (ಜೂ.01): ರಾಜ್ಯ ಸರ್ಕಾರವು ಅ.10, 2024ರಂದು ಹೊರಡಿಸಿದ್ದ ಆದೇಶದ ಮೂಲಕ ಹುಬ್ಬಳ್ಳಿ ಗಲಭೆ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠವು ಅ.15, 2024ರಂದು ನೀಡಲಾಗಿದ್ದ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. ಈ ಕುರಿತಂತೆ ವಕೀಲ ಗಿರೀಶ್ ಭಾರದ್ವಾಜ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation – PIL) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 'ಸರ್ಕಾರದ ಆದೇಶವನ್ನು ಕಾನೂನು ಬಾಹಿರ'ವೆಂದು ವಜಾಗೊಳಿಸಿದೆ.

ಪ್ರಭಾವಿಗಳ ವಿರುದ್ಧದ ಕೇಸ್‌ಗಳು ಹಿಂದಕ್ಕೆ:

ಸರ್ಕಾರ ಹಿಂಪಡೆಯಲು ಯತ್ನಿಸಿದ ಪ್ರಕರಣಗಳಲ್ಲಿ ರಾಜಕೀಯ ನಾಯಕರು, ಪ್ರಭಾವಿ ವ್ಯಕ್ತಿಗಳು, ಹಾಗೂ ವಿವಿಧ ಸಂಘಟನೆಗಳ ಹೋರಾಟಗಾರರ ವಿರುದ್ಧದ ಆರೋಪಗಳು ಸೇರಿವೆ. ಈ ಪೈಕಿ ಹಲವುವು ಸೃಷ್ಟಿಸಿದ ಗಲಭೆಗಳು, ಸಾರ್ವಜನಿಕ ಆಸ್ತಿ ಹಾನಿ, ಹಾಗೂ ಶಾಂತಿಗೆ ಧಕ್ಕೆಯಾಗುವ ರೀತಿಯ ಆರೋಪಗಳೊಂದಿಗೆ ಸಂಬಂಧಪಟ್ಟಿದ್ದವು. ಈ ಹಿನ್ನೆಲೆಯಲ್ಲು ನ್ಯಾಯಪೀಠವು 'ಅಪರಾಧದ ಗಂಭೀರತೆಯನ್ನು ಮೀರಿ, ಸರ್ಕಾರ ತನ್ನ ರಾಜಕೀಯ ಅಜಂಡಾ ಅನುಸಾರ ಕ್ರಮ ತೆಗೆದುಕೊಳ್ಳುವುದು ನ್ಯಾಯ ವ್ಯವಸ್ಥೆಗೆ ಅವಮಾನವಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ, ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸುತ್ತಾ, 'ಅಪರಾಧಿಗಳು ಸಮಾಜದ ವಿರುದ್ಧವೇ ಅಪರಾಧ ಮಾಡಿದ್ದಾರೆ ಎಂಬ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು' ಎಂದು ಖಾರವಾಗಿ ಹೇಳಿದೆ.

ಸರ್ಕಾರಕ್ಕೆ ಛೀಮಾರಿ ಹಾಕಿದ ಬೊಮ್ಮಾಯಿ

ಹುಬ್ಬಳ್ಳಿ ಪೊಲಿಸ್ ಠಾಣೆ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಪೀಠ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ತೀರ್ಪು ನೀಡಿದೆ. ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ಹಿಂಪಡೆದಿತ್ತು. ಆ ಕ್ರಮ ಸರಿಯಲ್ಲ ಎಂದು ಆದೇಶ ಮಾಡಿದೆ. ನಾನು ಹಿಂದೆ ಹೇಳಿದ್ದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವ ಪ್ರಕರಣ ವಾಪಸ್ ಪಡೆಯುವುದು ಸರಿಯಲ್ಲ. ಆದರೂ ರಾಜಕೀಯ ಒತ್ತಡಕ್ಕೆ, ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದ್ದರು. ನ್ಯಾಯಾಲಯ ಸರಿಯಾದ ಛೀಮಾರಿ ಹಾಕಿದೆ. ರಾಜ್ಯದ ಸಚಿವ ಸಂಪುಟ, ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು. ಒಲೈಕೆ ರಾಜಕಾರಣ ಮಾಡಬಾರಬಾರದು. ಇನ್ನಾದರೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ ಗಲಭೆ ಕೇಸ್‌, ರಾಜ್ಯ ಸರ್ಕಾರಕ್ಕೆ ತಕ್ಕ ಶಾಸ್ತಿ ಎಂದ ಜೋಶಿ:

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪು ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಧಿಕಾರ ದುರುಪಯೋಗಕ್ಕೆ ತಕ್ಕ ಶಾಸ್ತಿ ಮಾಡಿದಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಧೀಕರಣದ ಈ ನಿರ್ಧಾರ ಕಾನೂನು ಸುವ್ಯವಸ್ಥೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಕಾನೂನಿನ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕಾಗಿ ನ್ಯಾಯಾಲಯಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕಾನೂನು ಇಲಾಖೆ ಮತ್ತು ಪೊಲೀಸರು ವಿರೋಧ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯುವ ತೀರ್ಮಾನ ತೆಗೆದುಕೊಂಡಿತ್ತು. ಆದರೆ, ರಾಜ್ಯ ಹೈಕೋರ್ಟ್‌ ಈಗ ಸರ್ಕಾರಕ್ಕೆ ತಕ್ಕ ಉತ್ತರ ನೀಡಿದೆ. ಹಳೇ ಹುಬ್ಬಳ್ಳಿ ಗಲಭೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಹಾಗಿದ್ದರೂ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಯಾವುದೇ ಸಮರ್ಪಕ ಕಾರಣಗಳನ್ನು ನೀಡದೆ ಪ್ರಕರಣ ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು. ಹೈಕೋರ್ಟ್‌ ತೀರ್ಪು ಇದಕ್ಕೆಲ್ಲ ಬ್ರೇಕ್‌ ಹಾಕಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.