ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿಪ್ರೋ ಕವಾಸಕಿ ಘಟಕ ವಿಸ್ತರಣೆಗೆ ಜಪಾನ್ನ ಕವಾಸಕಿ ಹೆವಿ ಇಂಡಸ್ಟ್ರೀಸ್ ಒಪ್ಪಿಗೆ ನೀಡಿದೆ. ಮುಂದಿನ 10 ವರ್ಷಗಳಲ್ಲಿ ಹಂತ ಹಂತವಾಗಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಉದ್ದೇಶಿಸಲಾಗಿದ್ದು, ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಭರ್ಜರಿ ಬೂಸ್ಟ್ ಸಿಗಲಿದೆ.
ಬೆಂಗಳೂರು / ಟೋಕಿಯೋ: ಕರ್ನಾಟಕದ ಉತ್ಪಾದನಾ ಮತ್ತು ಎಂಜಿನಿಯರಿಂಗ್ ವಲಯದ ಸಾಮರ್ಥ್ಯಕ್ಕೆ ಮತ್ತೊಂದು ಬಲವಾದ ಮನ್ನಣೆ ದೊರೆತಿದ್ದು, ಜಪಾನ್ನ ಪ್ರಮುಖ ಸಂಸ್ಥೆಯಾದ ಕವಾಸಕಿ ಹೆವಿ ಇಂಡಸ್ಟ್ರೀಸ್ ರಾಜ್ಯದಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ ತನ್ನ ವಿಸ್ತರಣಾ ಘಟಕವನ್ನು ಸ್ಥಾಪಿಸುವ ಸಂಬಂಧ ಜಪಾನ್ನ ಟೋಕಿಯೋದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮುಂದಿನ 10 ವರ್ಷಗಳ ಅವಧಿಯಲ್ಲಿ ‘ವ್ಹಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ’ ಘಟಕದ ವಿಸ್ತರಣೆಗಾಗಿ ಈ ಹೂಡಿಕೆ ನಡೆಯಲಿದ್ದು, ನಿರ್ಮಾಣ ಉಪಕರಣಗಳ ಉದ್ಯಮಕ್ಕೆ ಅಗತ್ಯವಾದ ವಿವಿಧ ಬಿಡಿಭಾಗಗಳ ತಯಾರಿಕಾ ಸಾಮರ್ಥ್ಯವನ್ನು ಇದು ಮತ್ತಷ್ಟು ಹೆಚ್ಚಿಸಲಿದೆ.
ಸುಮಾರು 600 ಉದ್ಯೋಗಗಳ ನಿರೀಕ್ಷೆ
ಪ್ರಸ್ತಾವಿತ ವಿಸ್ತರಣಾ ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತವಾಗಿ 200 ಕೋಟಿ ರೂಪಾಯಿಯಿಂದ 400 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಲಾಗುತ್ತದೆ. ಎರಡನೇ ಹಂತ ಹಂತದಲ್ಲಿ 400 ಕೋಟಿ ರೂಪಾಯಿಯಿಂದ 800 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ.
ಈ ವಿಸ್ತರಣಾ ಘಟಕದಲ್ಲಿ ನಿರ್ಮಾಣ ಸಲಕರಣೆಗಳ ಉದ್ಯಮಕ್ಕೆ ಅತ್ಯಗತ್ಯವಾದ ಹೈಡ್ರಾಲಿಕ್ ಪಂಪ್ಗಳು, ಸ್ವಿಂಗ್ ಮೋಟಾರ್ಗಳು ಸೇರಿದಂತೆ ವಿವಿಧ ನಿಖರ ಎಂಜಿನಿಯರಿಂಗ್ ಬಿಡಿಭಾಗಗಳನ್ನು ಉತ್ಪಾದಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡ ಬಳಿಕ ರಾಜ್ಯದ ಯುವಕರಿಗೆ ಸುಮಾರು 600 ಮಂದಿಗೆ ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಬಲಗೊಳ್ಳುತ್ತಿರುವ ಕರ್ನಾಟಕ – ಜಪಾನ್ ಕೈಗಾರಿಕಾ ಬಾಂಧವ್ಯ
2012ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ವ್ಹಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಸಂಸ್ಥೆಯ ಬೆಳವಣಿಗೆಯ ಪಯಣವು ಕರ್ನಾಟಕ ಮತ್ತು ಜಪಾನ್ ನಡುವಿನ ದೃಢ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್ಗಳು ಮತ್ತು ಮೋಟಾರ್ಗಳನ್ನು ಪೂರೈಸಿರುವ ಈ ಸಂಸ್ಥೆಯು, ಭಾರತದ ಎಕ್ಸ್ಕವೇಟರ್ ಹೈಡ್ರಾಲಿಕ್ ಪಂಪ್ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ.
2016ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 101 ಜಪಾನಿ ಗ್ರೀನ್ಫೀಲ್ಡ್ ಯೋಜನೆಗಳಲ್ಲಿ ಹೂಡಿಕೆಯಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ 525ಕ್ಕೂ ಹೆಚ್ಚು ಜಪಾನಿ ಕಂಪನಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಜಪಾನಿ ಹೂಡಿಕೆದಾರರಿಗೆ ಕರ್ನಾಟಕದ ಮೇಲಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.
‘ಇನ್ವೆಸ್ಟ್ ಕರ್ನಾಟಕ 2027’ಗೆ ಆಹ್ವಾನ
ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಭೂಮಿ, ಅಗತ್ಯ ಅನುಮತಿಗಳು, ಕ್ಲಿಯರೆನ್ಸ್ ಹಾಗೂ ಸೂಕ್ತ ಪ್ರೋತ್ಸಾಹಧನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಇದರೊಂದಿಗೆ, 2027ರ ಏಪ್ರಿಲ್ 20 ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ’ (Invest Karnataka 2027) ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಕವಾಸಕಿ ಸಂಸ್ಥೆಯ ನಾಯಕತ್ವಕ್ಕೆ ಆಹ್ವಾನ ನೀಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಹಾರೋಹಳ್ಳಿಯಲ್ಲಿ ವಿಪ್ರೋ ಕವಾಸಕಿ ನಿಖರ ಯಂತ್ರೋಪಕರಣಗಳ ವಿಸ್ತರಣೆಗಾಗಿ ಮುಂದಿನ 10 ವರ್ಷಗಳಲ್ಲಿ ₹800 ಕೋಟಿಯವರೆಗೆ ಹೂಡಿಕೆ ಮಾಡುವ ಕವಾಸಕಿ ಹೆವಿ ಇಂಡಸ್ಟ್ರೀಸ್ ನಿರ್ಧಾರವು ನಮ್ಮ ಕೈಗಾರಿಕಾ ಸಾಮರ್ಥ್ಯಕ್ಕೆ ದೊರೆತ ಮತ್ತೊಂದು ಬಲವಾದ ಅನುಮೋದನೆಯಾಗಿದೆ. ಇದರಿಂದ ನಮ್ಮ ಯುವಕರಿಗೆ ಸುಮಾರು 600 ಉತ್ತಮ ಉದ್ಯೋಗಗಳು ದೊರೆಯಲಿವೆ. ಇನ್ವೆಸ್ಟ್ ಕರ್ನಾಟಕ 2027 ಸಮಾವೇಶಕ್ಕೆ ಕವಾಸಕಿ ನಾಯಕತ್ವವನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಈ ಮಹತ್ವದ ಒಪ್ಪಂದದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕವಾಸಕಿ ಹೆವಿ ಇಂಡಸ್ಟ್ರೀಸ್ನ ಕೆಂಜಿ ಮಾಟ್ಸುಶಿತಾ ಹಾಗೂ ವ್ಹಿಪ್ರೋ ಕವಾಸಕಿ ಸಿಇಒ ಮಿನೋರು ಹಟ್ಸುಡಾ ಉಪಸ್ಥಿತರಿದ್ದರು.
















