ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮುಷ್ಕರದಿಂದ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

  • ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
  • ಇಂದು ವಿಭಾಗೀಯ ಪೀಠದ ಮುಂದೆ ವಿಚಾರಣೆ

 ಬೆಂಗಳೂರು (ಮೇ.19) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Add Asianetnews Kannada as a Preferred SourcegooglePreferred

ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌.ವಿ‌.ಶ್ರೀಧರ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಕೂಡಲೇ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಅರ್ಜಿ ಮಂಗಳವಾರ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಅರ್ಜಿದಾರರು, 2025ರ ಏ.1ರಂದು ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿ ವೇತನದಲ್ಲಿ ಶೇ 12.5ರಷ್ಟು ಪರಿಷ್ಕರಿಸಿದ್ದು, 1,271.92 ಕೋಟಿ ರುಪಾಯಿ ಹಂಚಿಕೆ ಮಾಡಿದೆ.

ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರು. ಬಿಡುಗಡೆ ಮಾಡಿದೆ. ಈ ಬಗ್ಗೆ ನೌಕರರ ಟ್ರೇಡ್ ಯೂನಿಯನ್ ಮತ್ತು ಸರ್ಕಾರದ ನಡುವೆ ಸಂಧಾನ ಸಂಬಂಧಿತ ವಿಚಾರಣೆ ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ತೊಂದರೆ:

ರಾಜ್ಯ ಸರ್ಕಾರವು ‘ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯ್ದೆ ಅಡಿ 2026ರ ಜ.1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿದೆ. ಹೀಗಿದ್ದರೂ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಈ ಪೈಕಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಅಲ್ಲದೇ, ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಮೇ 18ರಿಂದ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ದಿನಗೂಲಿಯವರು, ರೋಗಿಗಳು, ವಯಸ್ಸಾದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ಸಹ ಸಾರ್ವಜನಿಕ ಬಸ್‌ ಅವಲಂಬಿಸಿದ್ದಾರೆ. ಮುಷ್ಕರದಿಂದ ಅವರೆಲ್ಲರಿಗೂ ಸಮಸ್ಯೆಯಾಗಲಿದೆ ಎಂದು ಆಕ್ಷೇಪಿಸಲಾಗಿದೆ.

ಅದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು. ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಮತ್ತು ಸಾರಿಗೆ ನಿಮಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.