ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ಅವರ ಅಕ್ರಮದ ಆರೋಪಗಳಿಗೆ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಆರೋಪಗಳು ನಡೆದಾಗ ಅವರೇ ಅಧಿಕಾರದಲ್ಲಿದ್ರು , ಉಮಾಪತಿ ಅವರು 50 ಲಕ್ಷ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಸಂಘ ಹೇಳೋದೇನು?
- 60 ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ನಿರ್ದೇಶಕ ಕೋನಪ್ಪ ರೆಡ್ಡಿ ಆರೋಪಿಸಿದ್ದಾರೆ
- ಆ ನೇಮಕ, ವೇತನ ಶ್ರೇಣಿ ನಿಗದಿ, ಬೋಧಕ ಸಿಬ್ಬಂದಿ ನೇಮಕಾತಿ ವೇಳೆ ಕೋನರೆಡ್ಡಿಯೇ ಪ್ರಧಾನ ಕಾರ್ಯದರ್ಶಿ ಆಗಿದ್ದರು
- ವೇತನ ಶ್ರೇಣಿ ನಿಗದಿ ಮಾಡಿದ್ದಾಗ ಉಮಾಪತಿ ಖಜಾಂಚಿಯಾಗಿದ್ದರು. ಅವರಿಬ್ಬರು ಅಧಿಕಾರದಲ್ಲಿದ್ದಾಗಲೇ ನಿರ್ಣಯ ಆಗಿತ್ತು
- ಆದರೆ ಈಗ ಸುಖಾಸುಮ್ಮನೆ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುವುದು
ಬೆಂಗಳೂರು (ಜೂ.26): ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿ ಸೇರಿ ಇನ್ನಿತರ ವಿಚಾರಗಳಲ್ಲಿ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿರುವ ಸಂಘದ ನಿರ್ದೇಶಕರಾದ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ವಿರುದ್ಧ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರಿನಿವಾಸ್ ತಿಳಿಸಿದ್ದಾರೆ.
ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿರುದ್ಧ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ಮಾಡಿರುವ ಅಕ್ರಮದ ಆರೋಪದ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಎಲ್.ಶ್ರೀನಿವಾಸ್, ಡೆಂಟಲ್ ಕಾಲೇಜಿನ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿ, ಕಿಮ್ಸ್ ಆಸ್ಪತ್ರೆ ಬಿ ಬ್ಲಾಕ್ ನಿರ್ಮಾಣ, ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ನೇಮಕಾತಿ ಹಾಗೂ 60 ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೋನಪ್ಪ ರೆಡ್ಡಿ ಆರೋಪಿಸಿದ್ದಾರೆ. ಆದರೆ, ಈ ಎಲ್ಲ ಪ್ರಕ್ರಿಯೆಗಳು ನಡೆದಾಗ ಕೋನಪ್ಪ ರೆಡ್ಡಿ ಅವರೇ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ವೇತನ ಶ್ರೇಣಿ ನಿಗದಿ ಮಾಡಿದ್ದಾಗ ಉಮಾಪತಿ ಖಜಾಂಚಿಯಾಗಿದ್ದರು. ಅವರು ಅಧಿಕಾರದಲ್ಲಿದ್ದಾಗಲೇ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈಗ ಸುಖಾಸುಮ್ಮನೆ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
5 ಕೋಟಿ ನಷ್ಟವುಂಟು ಮಾಡಿದ್ದಾರೆ:
ಕೋನಪ್ಪ ರೆಡ್ಡಿ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಅವೈಜ್ಞಾನಿಕವಾಗಿ ಡೆಂಟಲ್ ಕಾಲೇಜಿನ ಸಿಬ್ಬಂದಿ ವೇತನ ಶ್ರೇಣಿ ನಿಗದಿ ಸೇರಿ ಇನ್ನಿತರ ವಿಚಾರದಲ್ಲಿ ಸಂಘಕ್ಕೆ 5.06 ಕೋಟಿ ರು. ನಷ್ಟವುಂಟಾಗಿರುವುದು ಪತ್ತೆಯಾಗಿದೆ. ಜತೆಗೆ ಸಂಘದ ಕಾಮಗಾರಿಗಳಿಗೆ ಸಂಬಂಧಿಸಿ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ್ದಾರೆ. ಈ ಕುರಿತು ಸಹಕಾರ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಅದರ ತನಿಖೆ ನಡೆಸಿದ್ದ ಸಹಕಾರ ಇಲಾಖೆಯ ಜಂಟಿ ನಿಬಂಧಕರು ಕೋನಪ್ಪ ರೆಡ್ಡಿ ಅಕ್ರಮ ಪತ್ತೆ ಮಾಡಿ ವರದಿ ನೀಡಿದ್ದರು. ಈ ಎಲ್ಲ ಕಾರಣದಿಂದಾಗಿ ಅವರ ಅಮಾನತಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅದಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಲಾಗಿದೆ. ಹೀಗೆ ಅಕ್ರಮದಲ್ಲಿ ಪಾಲ್ಗೊಂಡಿದ್ದವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಅವರ ಕಾಲದ್ದೇ ನೇಮಕಾತಿ:
ಇದೀಗ 60 ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಕೋನಪ್ಪ ರೆಡ್ಡಿ ಮತ್ತು ಉಮಾಪತಿ ಅವರು ಮಾಡಿರುವ ಆರೋಪವು ಅವರ ಕಾಲದ್ದೇ ಆಗಿದೆ. ಸಂಘಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಎಲ್ಲವನ್ನೂ ಸಂಘದ ನಿಯಮದಂತೆಯೇ ಮಾಡಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿಯೇ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ಶ್ರೀಧರ್, ನಿರ್ದೇಶಕರಾದ ಪ್ರಕಾಶ್, ಧರ್ಮೇಶ್, ಮಂಜೇಗೌಡ, ವೆಂಕಟರಾಮೇಗೌಡ, ಹನುಮಂತರಾಯಪ್ಪ ಇತರರಿದ್ದರು.
ಉಮಾಪತಿ ವಿರುದ್ಧದ ಆಡಿಯೋ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಅವರು, ಆಸ್ಪತ್ರೆ ಬಿ ಬ್ಲಾಕ್ ಕಾಮಗಾರಿ ನಿರ್ಮಾಣ ಸಂಬಂಧ ಕೆವಿಆರ್ ಸಂಸ್ಥೆಯಿಂದ ಉಮಾಪತಿ ಅವರು 50 ಲಕ್ಷ ರು. ಕಿಕ್‌ಬ್ಯಾಕ್ ಪಡೆದಿರುವ ಕುರಿತಂತೆ ಆಡಿಯೋ ಬಿಡುಗಡೆ ಮಾಡಿದರು. ಕೆವಿಆರ್ ಸಂಸ್ಥೆ ಪ್ರತಿನಿಧಿ ಮತ್ತು ಉಮಾಪತಿ ಅವರು ಹಣದ ವಿಚಾರವಾಗಿ ಮಾತನಾಡುತ್ತಿರುವ ವಿಚಾರ ಆಡಿಯೋದಲ್ಲಿದೆ.
ಈ ಕುರಿತು ಮಾತನಾಡಿದ ಗಂಗಾಧರ್, ಹೀಗೆ ಸಂಘದ ಕಾಮಗಾರಿ ವಿಚಾರವಾಗಿ ಕಿಕ್‌ಬ್ಯಾಕ್ ಪಡೆದಿರುವ ವಿಚಾರ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ಇನ್ನು, ಉಮಾಪತಿ ಸೇರಿ ಇತರರು ಕೆಲ ದಿನಗಳ ಹಿಂದೆ ರೌಡಿಗಳನ್ನು ಕರೆತಂದು ಸಂಘದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರು.


