ಪತ್ನಿಯ ನಕಲಿ ದಾಖಲೆ ಮತ್ತು ವಂಚನೆ ಆರೋಪದ ಮೇಲೆ ಪತಿಯನ್ನು ಬಂಧಿಸಿದ್ದ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನನ್ನು ದುರುಪಯೋಗಪಡಿಸಿಕೊಂಡು ನಾಗರಿಕರ ಜೀವನದೊಂದಿಗೆ ಆಟವಾಡುತ್ತಿದ್ದೀರಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪತಿಯನ್ನು ತಕ್ಷಣ ಬಿಡುಗಡೆ ಮಾಡಲು ಮತ್ತು ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.
ಮಹಿಳೆಯರ ಮೇಲೆ ಎಷ್ಟು ದೌರ್ಜನ್ಯ ನಡೆಯುತ್ತಿದೆಯೋ, ಅದೇ ಪ್ರಮಾಣದಲ್ಲಿ ಕೆಲವೆಡೆ ಮಹಿಳೆಯರಿಂದ ಪುರುಷರ ಮೇಲೂ ದೌರ್ಜನ್ಯ ಆಗುತ್ತಿವೆ. ಅದರಲ್ಲಿಯೂ ಮಹಿಳೆಯರಿಗಾಗಿಯೇ ಇರುವ ಕೆಲವು ಕಾನೂನುಗಳ ದುರುಪಯೋಗ ಸಿಕ್ಕಾಪಟ್ಟೆ ಆಗುತ್ತಿರುವ ಬಗ್ಗೆ ಇದಾಗಲೇ ಹೈಕೋರ್ಟ್ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿರುವುದು ಇದೆ. ಈಗ ಅಂಥದ್ದೇ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬಳ ದೂರಿನ ಮೇಲೆ ಪತಿಯನ್ನು ಅರೆಸ್ಟ್ ಮಾಡಿರುವ ಕರ್ನಾಟಕ ಪೊಲೀಸರ ಕ್ರಮಕ್ಕೆ ತೀವ್ರ ಕಿಡಿ ಕಾರಿರುವ ಹೈಕೋರ್ಟ್, ಹೀಗೆ ಮಾಡುವ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ತನ್ನ ಪರಿತ್ಯಕ್ತ ಪತ್ನಿಯಿಂದ ನಕಲಿ ದಾಖಲೆ ಮತ್ತು ವಂಚನೆ ಆರೋಪದ ಮೇಲೆ ಕಳೆದ ಏಪ್ರಿಲ್‌ನಿಂದ ಬಂಧನದಲ್ಲಿದ್ದ ವ್ಯಕ್ತಿಯೊಬ್ಬರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಪೊಲೀಸರು ನಾಗರಿಕರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ರಾಮಕೃಷ್ಣಂ ರಾಜು ಎಂಬ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಲು, ಅವರ ಪತ್ನಿ ಶಿವ ಲಕ್ಷ್ಮಿ ಡಿಸೆಂಬರ್ 19, 2025 ರಂದು ಅವರ ವಿರುದ್ಧ ದೂರು ದಾಖಲಿಸಿದ ನಂತರ ಏಪ್ರಿಲ್ 21 ರಂದು ವಂಚನೆ ಆರೋಪದ ಮೇಲೆ ಪತಿಯನ್ನು ಬಂಧಿಸಲಾಗಿತ್ತು. ಇದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇತ್ತೀಚಿನ ದಿನಗಳಲ್ಲಿ ಪತ್ನಿಯರು ಹಗಲು ರಾತ್ರಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ ಮತ್ತು ನೀವು (ಪೊಲೀಸರು) ಪತಿಯನ್ನು ನೇರವಾಗಿ ಬಂಧಿಸುತ್ತೀರಿ, ಪತಿ ಮತ್ತು ಪತ್ನಿಯ ನಡುವಿನ ಪಾಲುದಾರಿಕೆ ಪತ್ರವು ನಕಲಿ ಎಂದು ಹೇಳಲಾಗಿದ್ದರೂ ಸಹ, ಹೀಗೆ ಮಾಡಿದ್ದೀರಿ ಎಂದು ಪೊಲೀಸರಿಗೆ ಛೀಮಾರಿ ಹಾಕಿದ ಕೋರ್ಟ್, ಪತಿಯ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯ ಮುಂದಿನ ತನಿಖೆಗೆ ತಡೆಯೊಡ್ಡಿದರು. ಇದೇ ವೇಳೆ ತನಿಖಾ ಅಧಿಕಾರಿಗೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ, "ಯಾರನ್ನಾದರೂ ಜೈಲಿಗೆ ಕಳುಹಿಸುವುದು ಒಂದು ಆಟ ಎಂದು ನೀವು ಭಾವಿಸುತ್ತೀರಿ. ನೀವು ನಾಗರಿಕರ ಜೀವನದ ಜೊತೆ ಆಟವಾಡುತ್ತಿದ್ದೀರಿ. ಅಪರಾಧ ನಡೆದಿದ್ದರೆ, ಪತ್ನಿ ದೂರು ದಾಖಲಿಸಿದ್ದಾಳೆ ಎಂಬ ಕಾರಣಕ್ಕಾಗಿ ಅಲ್ಲ, ಕಾನೂನಿನ ಪ್ರಕಾರ ಆರೋಪಿಯನ್ನು ಬಂಧಿಸಿ" ಎಂದು ಹೇಳಿದರು.
ತನಿಖೆಯಾಗಿಲ್ಲ
ದೂರು ದಾಖಲಾದ ಸುಮಾರು ಮೂರು ತಿಂಗಳವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ ನ್ಯಾಯಾಲಯಕ್ಕೆ ತಿಳಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 35 ರ ಅಡಿಯಲ್ಲಿ ನೋಟಿಸ್ ನೀಡಲಾಗಿಲ್ಲ ಎಂದು ಅವರು ಹೇಳಿದರು, ಇದು ಪೊಲೀಸ್ ಅಧಿಕಾರಿಗಳು ವಾರಂಟ್ ಅಥವಾ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ವ್ಯಕ್ತಿಯನ್ನು ಬಂಧಿಸಬಹುದಾದ ಸಂದರ್ಭಗಳನ್ನು ವಿವರಿಸುತ್ತದೆ. ಆದಾಗ್ಯೂ, ತನಿಖಾ ಅಧಿಕಾರಿಯನ್ನು ಬದಲಾಯಿಸಿದ ನಂತರ ಅರ್ಜಿದಾರರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ನ್ಯಾಯಾಲಯದಲ್ಲಿ ಹಾಜರಿದ್ದ ತನಿಖಾ ಅಧಿಕಾರಿ, ಅರ್ಜಿದಾರರಿಗೆ ಎರಡು ನೋಟಿಸ್‌ಗಳನ್ನು ನೀಡಿರುವುದಾಗಿ ಹೇಳಿದ್ದಾರೆ. ತನಿಖೆಯಲ್ಲಿ ಸಹಕರಿಸದಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದರು. ಅರ್ಜಿದಾರರ ವಿರುದ್ಧದ ಆರೋಪಗಳು ನಕಲಿ ಮತ್ತು ವಂಚನೆಯಾಗಿದ್ದು, ಇವುಗಳಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಬಹುದು ಎಂದು ಪೀಠ ಗಮನಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಮೌಖಿಕವಾಗಿ, "ಇದು ಪೊಲೀಸರು ಕಾನೂನಿನ ಸಂಪೂರ್ಣ ದುರುಪಯೋಗವಾಗಿದೆ" ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು
ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳು ಒಬ್ಬ ವ್ಯಕ್ತಿಯನ್ನು ಬಂಧಿಸುವುದು "ಕೊನೆಯ ಆಯ್ಕೆಯಾಗಿರಬೇಕು" ಎಂದು ಹೇಳಿವೆ. ಅದರ ಹೊರತಾಗಿಯೂ ಈ ರೀತಿ ಪದೇ ಪದೇ ಪೊಲೀಸರು ಮಾಡುತ್ತಿದ್ದಾರೆ. ತನಿಖಾಧಿಕಾರಿಯು ಯಾವುದೇ ಕಾರಣ ಅಥವಾ ಸಮರ್ಥನೆ ಇಲ್ಲದೆ ಮತ್ತು ಅರ್ಜಿದಾರರ ಬಂಧನಕ್ಕೆ ಯಾವುದೇ ಸ್ಪಷ್ಟ ಕಾರಣವನ್ನು ಒದಗಿಸದೆ, ಕೇವಲ ತನಿಖೆಯಲ್ಲಿ ಸಹಕರಿಸಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರನ್ನು ಬಂಧಿಸುವಲ್ಲಿ ಅನಗತ್ಯ ಆತುರ ತೋರಿಸುವುದು ಅರ್ಜಿದಾರರನ್ನು ಜೈಲಿನಿಂದ ಬಿಡುಗಡೆ ಮಾಡಲು ಕಾರಣವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಕಾನೂನಿನ ಸಂಪೂರ್ಣ ಉಲ್ಲಂಘನೆ ಮಾಡಿದ ತನಿಖಾಧಿಕಾರಿಯನ್ನು ಖುಲಾಸೆಗೊಳಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದ ಪೀಠ, ಸ್ಟೇಷನ್ ಹೌಸ್ ಆಫೀಸರ್ ಅಥವಾ ಬಾಗಲೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತು. ಕ್ರಮ ಕೈಗೊಂಡ ವರದಿಯನ್ನು 12 ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಪೀಠವು ಸೂಚಿಸಿತು. ಪ್ರಕರಣದ ತನಿಖೆ ನಡೆಸಿದ ಹಿಂದಿನ ತನಿಖಾಧಿಕಾರಿಯ ನಡವಳಿಕೆಯನ್ನು ತನಿಖೆ ಮಾಡುವಂತೆಯೂ ನ್ಯಾಯಾಲಯವು ಸೂಚಿಸಿತು.
ಏನಿದು ಕೇಸ್?
ರಾಮಕೃಷ್ಣಂ ರಾಜು ಮತ್ತು ಶಿವ ಲಕ್ಷ್ಮಿ ಮದುವೆಯಾಗಿ 12 ವರ್ಷಗಳಾಗಿವೆ ಮತ್ತು ಒಬ್ಬ ಮಗಳನ್ನು ಹೊಂದಿದ್ದಾರೆ. 2023 ರಲ್ಲಿ, ಲಕ್ಷ್ಮಿ ರಾಜು ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ, ಅದು ಇನ್ನೂ ಬಾಕಿ ಇದೆ. ಅದೇ ವರ್ಷ ಅವರು ವಿಚ್ಛೇದನ ಅರ್ಜಿಯನ್ನು ಸಹ ಸಲ್ಲಿಸಿದರು. ಡಿಸೆಂಬರ್ 19, 2025 ರಂದು ಸಲ್ಲಿಸಲಾದ ದೂರಿನಲ್ಲಿ, ಡಿಸೆಂಬರ್ 12, 2025 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಾಗಲೂರು ಶಾಖೆಯಿಂದ ತನ್ನ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆಯಲಾಗಿದೆ ಎಂದು ಅಧಿಕೃತ ನೋಟಿಸ್ ಬಂದಿತ್ತು ಎಂದು ಲಕ್ಷ್ಮಿ ಆರೋಪಿಸಿದ್ದಾರೆ. ತನ್ನ ಒಪ್ಪಿಗೆ ಅಥವಾ ಅನುಮತಿಯಿಲ್ಲದೆ ತನ್ನ ಸಹಿಯನ್ನು ನಕಲಿ ಮಾಡುವ ಮೂಲಕ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ರಾಜು 2023 ರಲ್ಲಿ ಪಾಲುದಾರಿಕೆ ಪತ್ರವನ್ನು ಸಹ ನಕಲಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ತ್ರಿವಿಕ್ರಮ್ ಎಸ್, ಅರ್ಜಿದಾರರನ್ನು ಬೆದರಿಸುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ವಾದಿಸಿದರು. ದೂರನ್ನು ಓದುವುದರಿಂದ ಪತ್ನಿ ತನ್ನ ಪತಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಉದ್ದೇಶವನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ವಿಚಾರಣೆಯ ಸಮಯದಲ್ಲಿ, ವಿವಾಹದ ಸುಳ್ಳು ಭರವಸೆ ಸೇರಿದಂತೆ ವಂಚನೆಯ ವಿಧಾನಗಳ ಮೂಲಕ ಪಡೆದ ಲೈಂಗಿಕ ಸಂಭೋಗವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಒಂದು ವಿಭಾಗದ ದುರುಪಯೋಗದ ಬಗ್ಗೆಯೂ ಪೀಠವು ಕಳವಳ ವ್ಯಕ್ತಪಡಿಸಿತು.


