Karnataka Flood Relief: ಕೇಂದ್ರದಿಂದ ನಯಾಪೈಸೆ ನೆರೆ ಪರಿಹಾರ ಇಲ್ಲ: ಸಿದ್ದರಾಮಯ್ಯ
*ಸತತ 3 ವರ್ಷದಿಂದ ರಾಜ್ಯದಲ್ಲಿ ಪ್ರವಾಹ
*ಈ ವರ್ಷ ಕೇಂದ್ರದಿಂದ ಹಣವೇ ಬಂದಿಲ್ಲ
*ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆ
*ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಸುವರ್ಣಸೌಧ (ಡಿ. 14): ಸತತ ಮೂರು ವರ್ಷಗಳಿಂದ ತೀವ್ರ ಅತಿವೃಷ್ಟಿ (Flood in Karnataka), ಪ್ರವಾಹದಿಂದ ರಾಜ್ಯ ತತ್ತರಿಸಿದೆ. ಕಳೆದ ಐದು ತಿಂಗಳಲ್ಲೇ ಮೂರು ಬಾರಿ ನೆರೆ ಉಂಟಾಗಿದ್ದು, 12.5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಎನ್‌ಡಿಆರ್‌ಎಫ್ (NDRF) ನಿಯಮಾವಳಿ ಪ್ರಕಾರವೇ 11,916 ಕೋಟಿ ರು. ನಷ್ಟಉಂಟಾಗಿದ್ದರೂ ಕೇಂದ್ರ ಸರ್ಕಾರ ಈ ವರ್ಷ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಕಿಡಿಕಾರಿದ್ದಾರೆ. ರಾಜ್ಯದಲ್ಲಿನ ಪ್ರವಾಹ, ನೆರೆ ಹಾನಿ ಕುರಿತು ನಿಲುವಳಿ ಸೂಚನೆ ಮಂಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನೆರೆ ನಿರ್ವಹಣೆ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಕುರಿತು ತರಾಟೆಗೆ ತೆಗೆದುಕೊಂಡರು.
ಕಳೆದ ಮೂರು ವರ್ಷದಿಂದ ಅತಿವೃಷ್ಟಿ!
ಕಳೆದ ಮೂರು ವರ್ಷದಿಂದ ರಾಜ್ಯದ ಜನತೆ ಅತಿವೃಷ್ಟಿಹಾಗೂ ಬರದಿಂದ ತತ್ತರಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಉಂಟಾದರೆ ಕೆಲ ಜಿಲ್ಲೆಗಳಲ್ಲಿ ತೀವ್ರ ಬರ ಕಾಡಿದೆ. ಈ ವರ್ಷ 22 ಜಿಲ್ಲೆಗಳಲ್ಲಿ ನೆರೆ ಉಂಟಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಬರ ಉಂಟಾಗಿದೆ. ಇದರಿಂದಾಗಿ 3 ವರ್ಷದಲ್ಲಿ 2.5 ಲಕ್ಷ ಕೋಟಿ ರು. ನಷ್ಟಆಗಿದೆ. ಜೂನ್‌ನಿಂದ ಡಿಸೆಂಬರ್ ಮೊದಲ ವಾರದವರೆ ಮೂರು ಬಾರಿ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನೆರೆ ಉಂಟಾಗಿದೆ.
3 ಪ್ರವಾಹ ಬಂದರೂ ಒಂದು ಪೈಸೆ ಪರಿಹಾರ ಇಲ್ಲ!
ದಕ್ಷಿಣ ಒಳನಾಡು, ಮಲೆನಾಡು, ಉತ್ತರ ಒಳನಾಡು ಭಾಗದಲ್ಲಿ ಶೇ.75ರಿಂದ 80ರಷ್ಟುಬೆಳೆ ನೆಲಕಚ್ಚಿದ್ದು, ರೈತ ಕಂಗಾಲಾಗಿದ್ದಾನೆ. 3 ಪ್ರವಾಹ ಬಂದರೂ ಕೇಂದ್ರ ಸರ್ಕಾರ ಒಂದು ಪೈಸೆ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರವೂ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿಲ್ಲ. ರಸ್ತೆ, ಸೇತುವೆ, ಕಟ್ಟಡಗಳು, ಸಾರ್ವಜನಿಕರ ಮನೆಗಳು ಹಾನಿಯಾಗಿವೆ. ಹೀಗಿದ್ದರೂ ಕೇಂದ್ರ ಸರ್ಕಾರವು ತಲೆಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದರು.
ಯುಪಿಎ ಸರ್ಕಾರ ಎಷ್ಟುಪರಿಹಾರ ನೀಡಿತ್ತು?
ಕಳೆದ 3 ವರ್ಷದಿಂದಲೂ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಈ ಬಗ್ಗೆ ಪ್ರಶ್ನಿಸಿದರೆ 2013ರಲ್ಲಿ ಯುಪಿಎ ಸರ್ಕಾರ ಎಷ್ಟುಪರಿಹಾರ ನೀಡಿತ್ತು ಎನ್ನುತ್ತಾರೆ. ರಾಜ್ಯದಲ್ಲಿ 2013ರಲ್ಲಿ ವರ್ಷಕ್ಕೆ 4 ಸಾವಿರ ಕೋಟಿ ರು. ಪೆಟ್ರೋಲಿಯಂ ತೆರಿಗೆ ಸಂಗ್ರಹವಾಗುತ್ತಿತ್ತು. ಈ ವರ್ಷ 36 ಸಾವಿರ ಕೋಟಿ ರು.ಗಳನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸಿದೆ. ಆದರೆ ರಾಜ್ಯದ ಜನತೆಗೆ ಪರಿಹಾರ ನೀಡಲು ಮಾತ್ರ ಮುಂದಾಗುತ್ತಿಲ್ಲ.
ಈ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದು ಹೇಳಿದರು.
ಇದಕ್ಕೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.
ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಲು ಕಾಮಗಾರಿ ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್, ಬಿಟ್‌ಕಾಯಿನ್ ಸೇರಿದಂತೆ ಯಾವ್ಯಾವ ವಿಷಯಗಳನ್ನು ಮುಂದು ಮಾಡಬೇಕು ಎಂದು ನಿರ್ಧರಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ನಡೆಯಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ 8.30 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಎಲ್ಲಾ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕಾಶಿಗೆ ಪ್ರವಾಸ ಕೈಗೊಂಡಿರುವುದರಿಂದ ಕಾಂಗ್ರೆಸ್ ಪ್ರಮುಖ ವಿಷಯ ಪ್ರಸ್ತಾಪಿಸುತ್ತಿಲ್ಲ. ಆದರೆ, ಬುಧವಾರದಿಂದ ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಉದ್ದೇಶ ಹೊಂದಿದ್ದು, ಈ ಹಿನ್ನಲೆಯಲ್ಲಿ ಬುಧವಾರವೇ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಪಕ್ಷದ ಕಾರ್ಯತಂತ್ರವೇನಾಗಿರಬೇಕು ಎಂಬುದು ನಿರ್ಧಾರವಾಗಲಿದೆ.
ಇದನ್ನೂ ಓದಿ:
1)Belagavi Bandh ಎಂಇಎಸ್ ಮುಖಂಡನ ಮುಖಕ್ಕೆ ಮಸಿ, ಇಂದು ಬೆಳಗಾವಿ ಬಂದ್‌ಗೆ ಕರೆ!
2)40% Commission: ಕಮಿಷನ್ ಆರೋಪ, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಗುತ್ತಿಗೆದಾರರ ಸಂಘ
3)Love Jihad: ಮತಾಂತರ ನಿಷೇಧ ಕಾಯ್ದೆ ಬೆನ್ನಲ್ಲೇ ಲವ್ ಜಿಹಾದ್‌ಗೂ ಕಡಿವಾಣ?ಸಚಿವರ ಸುಳಿವು