40% Commission: ಕಮಿಷನ್ ಆರೋಪ, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಗುತ್ತಿಗೆದಾರರ ಸಂಘ
* ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ
* ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಗುತ್ತಿಗೆದಾರರ ಸಂಘ
* ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ
ಬೆಂಗಳೂರು, (ಡಿ.13): ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ರಾಜ್ಯ ಗುತ್ತಿಗೆದಾರರು ಶೇ 40ರ ಕಮಿಷನ್ ಆರೋಪ ಮಾಡಿರುವುದು ಭಾರೀ ಸಂಚಲನ ಮೂಡಿಸಿದ್ದು, ಈ ಬಗ್ಗೆ ಇಂದು (ಸೋಮವಾರ) ಬೆಳಗಾವಿ ಸುವರ್ಣಸೌಧದಲ್ಲಿ ಮಹತ್ವದ ಬೆಳವಣಿಗೆಗಳು ನಡೆದವು.
ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ಅವ್ಯವಹಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿರುವ ಗುತ್ತಿಗೆದಾರರ ಸಂಘವು(contractors Organization) ಸುದ್ದಿಗೋಷ್ಠಿ ನಡೆಸಿ, ಜಲಸಂಪನ್ಮೂಲ ಇಲಾಖೆಯ ಬಗ್ಗೆ ಗಂಭೀರ ಆರೋಪ ಮಾಡಿತ್ತು. ಈ ವಿಚಾರ ಸದನದಲ್ಲಿಯೂ ಪ್ರಸ್ತಾಪವಾಗಿತ್ತು. ಪ್ರತಿಪಕ್ಷಗಳು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದವು. ಇದೀಗ ಗುತ್ತಿಗೆದಾರರ ಸಂಘ ಮತ್ತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
40% Commission: ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು!
ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಗುತ್ತಿಗೆದಾರರ ಸಂಘ
ಬಿಜೆಪಿ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಜನವರಿ 3ರಂದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ (Protest) ನಡೆಸುವುದಾಗಿ ಕರೆ ನೀಡಿದರು.
ಇಂದು (ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 22,000 ಕೋಟಿ ರೂ. ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ತಕ್ಷಣ ಬಿಡುಗಡೆಗೊಳಿಸಬೇಕು. ಪ್ಯಾಕೇಜ್ ಗುತ್ತಿಗೆ ವ್ಯವಸ್ಥೆಯಲ್ಲಿ ಸ್ಥಳೀಯ ಗುತ್ತಿಗೆದಾರರನ್ನು ಸದೆ ಬಡಿಯಲಾಗುತ್ತಿದೆ. ಜನವರಿ 3 ರ ಒಳಗೆ ಸರ್ಕಾರ ನಮ್ಮ ಜೊತೆ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಜನವರಿ 3 ರಿಂದ ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
Letter To PM MOdi : 40% ಕಮಿಷನ್ ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ
ಗುತ್ತಿಗೆದಾರರು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದೇವೆ. ಗುತ್ತಿಗೆಗಳಿಗೆ ಕಮಿಷನ್ ಕೊಡಬೇಕು. ಯಡಿಯೂರಪ್ಪ ಸಿಎಂ ಆಗಿದ್ದಾಗ ಭೇಟಿಗೆ ಮನವಿ ಮಾಡಿ ಪತ್ರ ಬರೆದಿದ್ದೆವು. ಆಗ ಅವಕಾಶ ಕೊಡಲಿಲ್ಲ. ನಂತರ ಪ್ರಧಾನಿಯವರಿಗೆ ಪತ್ರ ಬರೆದೆವು. ನಂತರ ಬೊಮ್ಮಾಯಿ ಸಿಎಂ ಆದಾಗ ಪತ್ರ ಬರೆದರೂ ಅವಕಾಶ ಸಿಗಲಿಲ್ಲ. ಇದರ ಮಧ್ಯೆ ರಾಜ್ಯಪಾಲರ ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಿದೆವು. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳ ಭೇಟಿ ಮಾಡಿದರು ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆಗಳಲ್ಲಿ ಶೇ 40 ಕ್ಕಿಂತ ಹೆಚ್ಚು ಭ್ರಷ್ಟಾಚಾರ ನಡೀತಿದೆ. ನಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಭ್ರಷ್ಟಾಚಾರದ ಕುರಿತು ಸ್ವತಂತ್ರ ತನಿಖೆಗೆ ಸರ್ಕಾರ ಆದೇಶ ಮಾಡಲಿ, ನಾವು ತನಿಖೆಗೆ ಎಲ್ಲಾ ದಾಖಲೆಗಳನ್ನು ಕೊಡುತ್ತೇವೆ. ನಾವು ಗುತ್ತಿಗೆದಾರರು ಮಾತ್ರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ಗೆ ಸೇರಿದವರಲ್ಲ ಎಂದರು.2019ರಿಂದ ಗುತ್ತಿಗೆ ಭ್ರಷ್ಟಾಚಾರ ಗಣನೀಯವಾಗಿ ಹೆಚ್ಚಾಗಿದೆ. ಮೊದಲೆಲ್ಲ ಶೇ 10, ಶೇ15ರಷ್ಟು ಭ್ರಷ್ಟಾಚಾರ ಇತ್ತು. ನಾವು ಗುತ್ತಿಗೆ ಪಡೆಯಲು ಹಣ ಕೊಡಲೇಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈಗಲೇ ಹೆಸರು ಬಹಿರಂಗ ಪಡಿಸಲ್ಲ
ಕಮಿಷನ್ ಪಡೆದವರ ಹೆಸರು ಬಹಿರಂಗ ಪಡಿಸುವಂತೆ ಮಾಧ್ಯಮದವರ ಪ್ರಶ್ನೆಗೆ ಗುತ್ತಿಗೆಗಳಲ್ಲಿ ಕಮೀಷನ್ ಪಡೆದ ಜನಪ್ರತಿನಿಧಿಗಳ ಹೆಸರು ಹೇಳಲಾಗುವುದಿಲ್ಲ. ಬಹಿರಂಗವಾಗಿ ಯಾರ ಹೆಸರೂ ಈ ಸಂದರ್ಭದಲ್ಲಿ ಹೇಳಲು ಆಗಲ್ಲ. ನಮ್ಮ ಬಳಿ ದಾಖಲೆಗಳಿವೆ. ತನಿಖೆಗೆ ವಹಿಸಿದರೆ ದಾಖಲೆ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಕೇಶ್ ಸಿಂಗ್ ಅವರ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶ ಮಾಡಿದೆ. ಆದರೆ, ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೀತಾ ಇದೆ. ಅದೇ ಇಲಾಖೆಯ ಮುಖ್ಯಸ್ಥ ರಾಕೇಶ್ ಸಿಂಗ್, ಹೀಗಾಗಿ ಪ್ರತ್ಯೇಕ ಸಂಸ್ಥೆಯಿಂದ ತನಿಖೆ ಮಾಡಿಸಬೇಕೆಂದು ಮನವಿ ಮಾಡಿದರು.
ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಎಲ್ಲ ಗುತ್ತಿಗೆದಾರರೂ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಿ, ಹೊರಗಿನ ಗುತ್ತಿಗೆದಾರರಿಗೆ ಮಣೆ ಹಾಕಲಾಗ್ತಿದೆ. ನೀರಾವರಿ, ಲೊಕೋಪಯೋಗಿ ಇಲಾಖೆ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ಆಗ್ತಿದೆ. ಪ್ರತಿ ಜಿಲ್ಲೆಯಲ್ಲೂ ಗುತ್ತಿಗೆದಾರರಲ್ಲದ ನೂರು ಜನರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರೂ ತಪ್ಪು ಮಾಡಿದ್ದಾರೆ. ಅದನ್ನು ಸರಿಪಡಿಸುವ ಕೆಲಸಕ್ಕೆ ಈಗ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಭ್ರಷ್ಟಚಾರದಲ್ಲಿ ಗುತ್ತಿಗೆದಾರರು ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಆಗಲಿ. ಯಾವುದೇ ರೀತಿಯ ಶಿಕ್ಷೆ ಕೊಟ್ಟರೂ ಸ್ವೀಕಾರ ಮಾಡಲಾಗುವುದು ಎಂದರು.ಬಳಿಕ ಗುತ್ತಿಗೆದಾರ ರವೀಂದ್ರ ಮಾತನಾಡಿ, ಸ್ಥಳೀಯ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಗುತ್ತಿಗೆ ಕಮಿಷನ್ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ವಹಿಸಲಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸಲಿ ಒತ್ತಾಯಿಸಿದರು.