೪೦ ಲಕ್ಷ ರೂ.ಗಿಂತ ಅಧಿಕ ವ್ಯವಹಾರದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ, ತೆರಿಗೆ ವಸೂಲಿ ಮಾಡುವುದಿಲ್ಲ ಮತ್ತು ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ಜು.23): ರಾಜ್ಯದಲ್ಲಿ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿಯಿದೆ. ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಈಗಾಗಲೇ ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ವ್ಯಾಪಾರಿಗಳಿಗೆ ಅಭಯ ನೀಡಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿಎಸ್‌ಟಿ ನೋಟೀಸ್ ನೀಡಿರುವ ಸಣ್ಣ ವ್ಯಾಪಾರಿಗಳ ಜೊತೆ ಇಂದು ಸಭೆ ಮಾಡಿದೆವು. ಸಣ್ಣ ವ್ಯಾಪಾರಿಗಳೂ ಸಭೆಯಲ್ಲಿ ಇದ್ದರು. ಅವರ ಅಹವಾಲುಗಳನ್ನು ಕೇಳಿದ್ದೇವೆ. ಅವರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ನೋಟೀಸ್‌ಗಳನ್ನು ಕೊಟ್ಟಿದ್ದಾರೆ. ಜಿಎಸ್‌ಟಿ ತೆರಿಗೆ ಹಾಕುವುದು ಕೇಂದ್ರ ಸರ್ಕಾರ. ಒಂದು ಪರ್ಸೆಂಟ್ ಟ್ಯಾಕ್ಸ್ ಹಾಕಿದ್ದಾರೆ. ಅದು ಕೂಡ 40 ಲಕ್ಷ ರೂ.ಗಿಂತ ಹೆಚ್ಚು ಟರ್ನ್ ಓವರ್ ಇದ್ದವರಿಗೆ ಮಾತ್ರ ನೋಟೀಸ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಮೂರು ವರ್ಷದ ಹಿಂದೆಯೇ ಟ್ಯಾಕ್ಸ್ ಕೊಡಬೇಕು ಅಂತಲೂ ಅಧಿಕಾರಿಗಳು ಹೇಳಿದ್ದಾರೆ. ತೆರಿಗೆ ವಿನಾಯಿತಿ ಇರುವವರಿಂದ ನಾವು ತೆರಿಗೆ ಸಂಗ್ರಹ ಮಾಡಲ್ಲ. ನೋಟೀಸ್ ಬಂದ ಕಾರಣ ಸ್ವಲ್ಪ ಗೊಂದಲಗಳು ಉದ್ಭವ ಆಗಿದೆ. ಆದ್ದರಿಂದ ನಾವು ಎಲ್ಲ ವರ್ತಕರಿಗೂ ಕಡ್ಡಾಯವಾಗಿ ನೊಂದಣಿ ಮಾಡಿಸಿ ಅಂತ ಹೇಳಿದ್ದೇವೆ. ಇದಕ್ಕೆ ವ್ಯಾಪಾರಿಗಳು ಕೂಡ ಒಪ್ಪಿಕೊಂಡಿದ್ದಾರೆ. ಇನ್ನು ಜಿಎಸ್‌ಟಿ ನೊಟೀಸ್ ಬಂದ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದು, ಸಹಾಯವಾಣಿ ಆರಂಭಿಸಲು ಕೇಳಿದ್ದಾರೆ. ಆದರೆ ಈಗಾಗಲೇ ಸಹಾಯವಾಣಿ ಇದೆ, ಇನ್ನೂ ಪರಿಣಾಮಕಾರಿಯಾಗಿ ಸಹಾಯವಾಣಿಯಿಂದ ಕೆಲಸ ಮಾಡುವುದಾಗಿ ಹೇಳಿದ್ದೇನೆ. ಈ ವ್ಯಾಪಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ, ಜಾಗೃತಿ ಉಂಟುಮಾಡುವ ಕಾರ್ಯಕ್ರಮ ಮಾಡಲು ಕೇಳಿದ್ದಾರೆ. ಈ ಬಗ್ಗೆ ಇಲಾಖೆಗೆ ಸೂಚನೆ ಕೊಟ್ಟಿದ್ಧೇನೆ ಎಂದು ತಿಳಿಸಿದರು.
ಜಿಎಸ್‌ಟಿ ನೊಟೀಸ್ ಕೊಟ್ಟಿರುವುದನ್ನು ವಿರೋಧಿಸಿ ರಾಜ್ಯದಾದ್ಯಂತ ಎಲ್ಲ ಸಣ್ಣ ವ್ಯಾಪಾರಿಗಳು ಇದೇ ಜು.25ರಂದು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಇದೀಗ ಅವರಿಗೆ ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದೇನೆ. ಅವರು ಪ್ರತಿಭಟನೆ ವಾಪಸ್ ಪಡೆಯಲು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಜಿಎಸ್‌ಟಿ ನೋಟೀಸ್ ಕೊಟ್ಟಿರುವವರ ಮೇಲೆ ಏನೂ ಕ್ರಮವಿಲ್ಲ. ಅಂದರೆ ತೆರಿಗೆ ವಸೂಲಿ ಇಲ್ಲ. ತುಂಬಾ ಜನ ತಮ್ಮ ಅಂಗಡಿಗಲ್ಲಿದ್ದ ಸ್ಕಾನರ್ ಗಳನ್ನು ತೆಗೆದು ಹಾಕಿರುವ ವಿಚಾರದ ಬಗ್ಗೆ ಮಾತನಾಡಿ, ಇದರ ಬಗ್ಗೆಯೂ ಕೂಡಾ ಚರ್ಚೆ ಆಗಿದೆ. ಈ ರೀತಿ ಮಾಡಬೇಡಿ, ರಿಜಿಸ್ಟರ್ ಮಾಡಿಕೊಳ್ಳಿ ಎಂದು ಮನವಿ ಮಾಡಲಾಗಿದೆ. ವ್ಯಾಪಾರಿಗಳ ಎಲ್ಲಾ ಗೊಂದಲಗಳನ್ನು ಈ ಸಭೆಯಲ್ಲಿ ನಿವಾರಣೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಬೇಕು. ಯುಪಿಐ ವಹಿವಾಟು ಕೈಬಿಟ್ಟರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೇವಲ 9 ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
