40ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸ್ತಿರೋ ಮಾರಾಟಗಾರರು, ಉದ್ಯಮಿಗಳು ಜಿಎಸ್​ಟಿ ಕಟ್ಟಬೇಕು ಎಂದು ನೀಡಿರುವ ನೋಟಿಸ್​ ಹಲವರಿಗೆ ಮುಳುವಾಗಿರುವ ಬೆನ್ನಲ್ಲೇ 1.63 ಕೋಟಿ ರೂ. ವ್ಯವಹಾರ ನಡೆಸ್ತಿರೋ ಹಾವೇರಿಯ ತರಕಾರಿ ಮಾರಾಟಗಾರನಿಗೆ ಬಂದಿದೆ ಶಾಕಿಂಗ್​ ನೋಟಿಸ್​. ಏನಿದು? 

ಯುಪಿಐ ಬಂದ ಮೇಲೆ ಹಲವಾರು ಮಾರಾಟಗಾರರಿಗೆ, ಚಿಕ್ಕಪುಟ್ಟ ಎಂದುಕೊಳ್ಳುವ ಉದ್ಯಮ ನಡೆಸುತ್ತಿರುವವರಿಗೆ ಭಾರಿ ಶಾಕ್​ ಆಗುವಂಥ ಸುದ್ದಿ ಈಚಿಗಿನ ನೋಟಿಸ್​ನಿಂದ ಶುರುವಾಗಿದೆ. 40 ಲಕ್ಷ ರೂಪಾಯಿಗೂ ಅಧಿಕ ವ್ಯವಹಾರ ನಡೆಸುತ್ತಿರುವವರಿಗೆ ಜಿಎಸ್​ಟಿ ಕಟ್ಟುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ನೋಟಿಸ್ ‌ ನೀಡಲಾಗಿದೆ. ಇದರ ಅರ್ಥ ಡಿಜಿಟಲ್​ ವ್ಯವಹಾರದಿಂದಲೇ ಇವರು ಇಷ್ಟೊಂದು ವ್ಯವಹಾರ ನಡೆಸುತ್ತಿದ್ದಾರೆ ಎಂದರೆ, ಇನ್ನು ಕ್ಯಾಷ್​ ಕೊಟ್ಟವರ ಲೆಕ್ಕ ಇದರಲ್ಲಿ ಸಿಗುವುದಿಲ್ಲ. ಆದರೆ, ಇದು ಹಲವರಿಗೆ ತಲೆನೋವಾಗಿ ಪರಿಣಮಿಸಿದ್ದು, ಸರ್ಕಾರವನ್ನು ಶಪಿಸುತ್ತಲೇ ಯುಪಿಐ ಪೇಮೆಂಟ್​ ಅನ್ನು ರದ್ದುಗೊಳಿಸಿದ್ದಾರೆ!

ಬೇಕರಿ, ಕಾಂಡಿಮೆಂಟ್ಸ್‌, ಟೀ- ತರಕಾರಿ ಅಂಗಡಿಯವರಿಗೆ ಲಕ್ಷಲಕ್ಷ ತೆರಿಗೆ ಬಾಕಿ ನೋಟಿಸ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 40 ಸಾವಿರ ಯುಪಿಐ (UPI) ದಾಖಲೆಯನ್ನು ಕಲೆ ಹಾಕಿ ಅದರಲ್ಲಿ 40 ಲಕ್ಷ ವಹಿವಾಟು ದಾಟಿದ ಆರು ಸಾವಿರ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ (Commercial Tax) ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಈಚೆಗೆ ತಿಳಿಸಿದ್ದರು. ಆದರೆ ಏಕಾಏಕಿ ತಮಗೆ ಮಾಹಿತಿಯನ್ನೇ ಕೊಡದೇ ನೋಟಿಸ್​ ನೀಡಲಾಗಿದೆ ಎಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯೂ ಇದಾಗಲೇ ಶುರುವಾಗಿದೆ. ಇದರ ಬಗ್ಗೆ ವಾದ-ಪ್ರತಿವಾದ ಬಲು ಜೋರಾಗಿಯೇ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ. ತಮಗೆ ಅನ್ಯಾಯ ಆಗ್ತಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರದಿಂದ ಏನೋ ಫ್ರೀ ಸಿಗ್ತಿದೆ ಎಂದು ಘೋಷಣೆ ಮಾಡದಿದ್ದರೂ ಜನರಿಗೆ ಅದು ಹೇಗೆ ತಲುಪುತ್ತದೆ, ಆದರೆ ಇಂಥ ವಿಷಯಕ್ಕೆ ಬಂದಾಗ ವಿಷಯ ಗೊತ್ತಾಗುವುದಿಲ್ಲವಾ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ.

ಇದರ ನಡುವೆಯೇ, ಹಲವರಿಗೆ ಜಿಎಸ್​ಟಿ ನೋಟಿಸ್​ ಬರಲು ಶುರುವಾಗಿದೆ. ಕೆಲವರಿಗೆ ಇದು ಸಂಕಷ್ಟವನ್ನೂ ತಂದೊಡ್ಡುತ್ತಿದೆ. ಅದೇ ರೀತಿ ಹಾವೇರಿಯ ಸಣ್ಣ ತರಕಾರಿ ಮಾರಾಟಗಾರನೊಬ್ಬನಿಗೆ ಭಾರಿ ತೆರಿಗೆ ನೋಟಿಸ್ ಬಂದಿದೆ. ದ ಸಣ್ಣ ತರಕಾರಿ ಅಂಗಡಿ ನಡೆಸುತ್ತಿರುವ ಶಂಕರಗೌಡ ಹಾದಿಮನಿ ಅವರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಯಮಗಳ ಅಡಿಯಲ್ಲಿ 29 ಲಕ್ಷ ರೂ. ಪಾವತಿಸಲು ಸೂಚಿಸಲಾಗಿದ್ದು, ಇದು ಅವರಿಗೆ ಶಾಕ್​ ಕೊಟ್ಟಿದೆ. ಶಂಕರಗೌಡ ಕಳೆದ ನಾಲ್ಕು ವರ್ಷಗಳಿಂದ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರ ಹೆಚ್ಚಿನ ಗ್ರಾಹಕರು ಯುಪಿಐ ಅಥವಾ ಇತರ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪಾವತಿಸುತ್ತಾರೆ. ನಾಲ್ಕು ವರ್ಷಗಳಲ್ಲಿ ಕ್ಯಾಷ್​ನಿಂದ ಪ್ರತ್ಯೇಕ ದುಡ್ಡು ಕೊಟ್ಟದ್ದು ಬಿಟ್ಟು, ಕೇವಲ ಯುಪಿಐ ವಹಿವಾಟಿನಿಂದ 1.63 ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ. ಈ ಹಿನ್ನೆಲೆಯಲ್ಲಿ 29 ಲಕ್ಷ ರೂ.ಗಳಷ್ಟು ಜಿಎಸ್‌ಟಿ ಬಾಕಿ ಇದೆ ಎಂದು ಜಿಎಸ್‌ಟಿ ಅಧಿಕಾರಿಗಳು ನೋಟಿಸ್​ ಕೊಟ್ಟು ಅವರಿಗೆ ಆಘಾತ ತಂದಿದ್ದಾರೆ.

ಶಂಕರಗೌಡ ಅವರು ರೈತರಿಂದ ನೇರವಾಗಿ ತಾಜಾ ತರಕಾರಿಗಳನ್ನು ಖರೀದಿಸಿ ತಮ್ಮ ಸಣ್ಣ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ತಾವು ಪ್ರತಿ ವರ್ಷ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವುದಾಗಿ ಹಾಗೂ ಅದಕ್ಕೆ ತಕ್ಕ ದಾಖಲೆ ಇಟ್ಟುಕೊಂಡರೂ 29 ಲಕ್ಷ ರೂಪಾಯಿಗಳ ಜಿಎಸ್​​ಟಿ ಹೇಗೆ ಬಂದಿದೆ ಎನ್ನುವುದು ಅವರಿಗೆ ಆಘಾತ ತಂದಿದೆ. ಈ ಮೊತ್ತವನ್ನು ವ್ಯವಸ್ಥೆ ಮಾಡುವುದು ಅಸಾಧ್ಯ ಎಂದು ಅವರು ಹೇಳುತ್ತಾರೆ. ಅಷ್ಟಕ್ಕೂ, ಕ್ಲಿಯರ್‌ಟ್ಯಾಕ್ಸ್ ಪ್ರಕಾರ, ತಾಜಾ ಮತ್ತು ಶೀತಲವಾಗಿರುವ ತರಕಾರಿಗಳಿಗೆ GST ಅಡಿಯಲ್ಲಿ ತೆರಿಗೆ ವಿಧಿಸಲಾಗುವುದಿಲ್ಲ. ಮಾರಾಟಗಾರರು ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ ತಾಜಾ ಮತ್ತು ಸಂಸ್ಕರಿಸದ ಮಾರಾಟ ಮಾಡಿದರೆ, ಅದರ ಮೇಲೆ ಯಾವುದೇ GST ಇರುವುದಿಲ್ಲ. ಇದರ ಹೊರತಾಗಿಯೂ ಜಿಎಸ್​ಟಿ ನೋಟಿಸ್​ ಎನ್ನುವುದು ಬಹುತೇಕರಿಗೆ (ಕಾನೂನುಬದ್ಧವಾಗಿ ನಡೆದುಕೊಳ್ಳುವವರಿಗೂ ಸೇರಿ) ದುಃಸ್ವಪ್ನವಾಗುತ್ತಿದೆ.