ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣವನ್ನು ಸಿಐಡಿ ತನಿಖೆಯಿಂದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಪ್ರೊಟೋಕಾಲ್ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಗೌರವ್ ಗುಪ್ತ ಅವರನ್ನು ನಿಯೋಜಿಸಲಾಗಿದೆ.
ಬೆಂಗಳೂರು (ಮಾ.12): ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದ ರಾಜ್ಯ ಸರ್ಕಾರ ಕೇವಲ ಎರಡೇ ತಿಂಗಳಲ್ಲಿ ಸಿಐಡಿ ತನಿಖೆಯಿಂದ ವಾಪಸ್ ಪಡೆದುಕೊಂಡಿದೆ. ಈ ಮೂಲಕ ರನ್ಯಾರಾವ್ ಕೇಸಿನಲ್ಲಿ ಸಚಿವರೊಬ್ಬರು ಭಾಗಿಯಾಗಿದ್ದಾರೆ ಎನ್ನುವ ಅನುಮಾನಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಆದರೆ, ಸರ್ಕಾರ ಕೊಡುವ ಕಾರಣವೇ ಬೇರೆಯಾಗಿದೆ.
ನಟಿ ರನ್ಯಾ ರಾವ್ ಚಿನ್ನದ ಕಳ್ಳ ಸಾಗಣೆಯಲ್ಲಿ ಸಿಕ್ಕಿಬಿದ್ದ ಬೆನ್ನಲ್ಲಿಯೇ ರಾಜ್ಯ ಸರ್ಕಾರದ ಪ್ರೋಟೋಕಾಲ್‌ನಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ತನಿಖೆ ಮಾಡಲು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇಲ್ಲಿ ನಟಿ ರನ್ಯಾ ರಾವ್ ಒಂದು ವರ್ಷದಲ್ಲಿ 28ರಿಂದ 30 ಬಾರಿ ದುಬೈಗೆ ಹೋಗಿ ಬಂದಿದ್ದರೂ, ಯಾರಿಗೂ ಸಿಕ್ಕಿಬೀಳದೇ ಹೇಗೆ ಹೊರಗೆ ಬರುತ್ತಿದ್ದರು ಎಂಬುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ರನ್ಯಾರಾವ್‌ಗೆ ಪ್ರೊಟೋಕಾಲ್ ಮೂಲಕ ರಕ್ಷಣೆ ಕೊಡುತ್ತಿದ್ದ ವ್ಯಕ್ತಿ ಯಾರೆಂಬುದು ಈ ತನಿಖೆಯಿಂದ ತಿಳಿದುಬರುತ್ತಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದ ತನಿಖೆಯನ್ನು ವಾಪಸ್ ಪಡೆದುಕೊಂಡಿದೆ. ಈ ಮೂಲಕ ಪ್ರೊಟೋಕಾಲ್‌ನಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಮುಚ್ಚಿಹಾಕಲು ಮುಂದಾಗಿದೆಯೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಸಿಐಡಿ ತನಿಖೆ ವಾಪಸ್ ಪಡೆದುಕೊಳ್ಳಲು ಸರ್ಕಾರದ ಕಾರಣ: ರಾಜ್ಯ ಸರ್ಕಾರ ಸಿಐಡಿ ತನಿಖೆಯಿಂದ ರನ್ಯಾ ರಾವ್ ಕೇಸ್ ವಾಪಸ್ ಪಡೆದಿದ್ದಕ್ಕೆ ಕಾರಣವನ್ನೂ ಕೊಟ್ಟಿದೆ. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡುವುದಕ್ಕೆ ಆರೋಪಿಯ ತಂದೆ ರಾಮಚಂದ್ರರಾವ್ ಅವರಿಂದ ಪ್ರೋಟೋಕಾಲ್ ದುರ್ಬಳಕೆ ಆಗಿದೆಯೇ ಎಂಬುದನ್ನು ತನಿಖೆ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ, ಪುನಃ ಸಿಐಡಿ ತನಿಖೆ ಬೇಡ ಎಂದು ರಾಜ್ಯ ಸರ್ಕಾರ ಆದೇಶ ವಾಪಸ್ ಪಡೆದಿದೆ. ಇನ್ನು ಗೌರವ್ ಗುಪ್ತ ಅವರು ಒಂದು ವಾರದೊಳಗೆ ಪ್ರೊಟೊಕಾಲ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ವರದಿ ನೀಡುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಸ್ಮಗ್ಲರ್‌ಗೆ ಪ್ರೋಟೋಕೋಲ್ ಸಿಕ್ಕಿದ್ದು ಹೇಗೆ?: ನಟಿ ರನ್ಯಾ ರಾವ್ ತಂದೆಗೂ ತನಿಖೆ ತೂಗುಕತ್ತಿ
ಈಗಾಗಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಸಿಬಿಐ ಈ ಪ್ರಕರಣವನ್ನು ತನಿಖೆ ಮಾಡುತ್ತಿವೆ. ಜೊತೆಗೆ, ನಟಿ ರನ್ಯಾ ರಾವ್ ಮನೆಯಲ್ಲಿ 2 ಕೋಟಿ ರೂ.ಗಿಂತ ಅಧಿಕ ಮೌಲ್ಯದ ನಗದು ಹಣ ಹಾಗೂ ಹಲವು ಕೆಜಿ ಚಿನ್ನ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯೂ ಈ ಪ್ರಕರಣವನ್ನು ತನಿಖೆ ಮಾಡಲು ಮುಂದಾಗಿದೆ. ಆದರೆ, ಮೇಲಿನ ಮೂರು ಇಲಾಖೆಗಳ ತನಿಖೆಯಲ್ಲಿ ಪ್ರೋಟೋಕಾಲ್‌ನಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರು ಕೈವಾಡವಿದೆ ಎಂಬುದರ ತನಿಖೆ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಮುಂದಿನ ತನಿಖೆ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡುವುದಕ್ಕೆಂದೇ 2 ವರ್ಷಕ್ಕೆ ಮಲ್ಟಿಪಲ್ ಎಂಟ್ರಿ ವೀಸಾ ಹಾಗೂ ಅಲ್ಲಿನ ರೆಸಿಡೆಂಟ್ ವೀಸಾ ಪಡೆದುಕೊಂಡಿದ್ದರು. ಈ ವೀಸಾ ಪಡೆದುಕೊಳ್ಳಲು 83 ಲಕ್ಷ ರೂ. ಅನ್ನು ಖರ್ಚು ಮಾಡಿದ್ದಾರೆ. ಇನ್ನು ನಟಿ ರನ್ಯಾ ಬೆಂಗಳೂರಿನ ಏಟ್ರಿಯಾ ಹೋಟೆಲ್‌ನ ಮಾಲೀಕರ ತಮ್ಮನ ಮಗ ತರುಣ್ ರಾಜ್ ಅವರ ದುಬೈನಲ್ಲಿದ್ದ ಒಂದು ಡೈಮೆಂಡ್ ಉದ್ಯಮದ ಪಾಲುದಾರಿಕೆಯನ್ನೂ ಹೊಂದಿದ್ದರು. ಈ ಬ್ಯೂಸಿನೆಸ್ ಉದ್ದೇಶದಿಂದ ಪದೇ ಪದೆ ನಟಿ ರನ್ಯಾ ರಾವ್ ದುಬೈಗೆ ಹೋಗಿ ಬರಲು ಕಾರಣ ಎಂದು ಹೇಳುತ್ತಿದ್ದರು.
ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್: ತರುಣ್ ಕಿಂಗ್‌ಪಿನ್, ನಟಿ ರನ್ಯಾ ರಾವ್ ಕೊರಿಯರ್?
