ನಟಿ ರನ್ಯಾ ರಾವ್ ಮಲತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್‌ ವಿರುದ್ಧ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಾರಥ್ಯದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. 

ಬೆಂಗಳೂರು (ಮಾ.12): ವಿದೇಶದಿಂದ ಚಿನ್ನ ಕಳ್ಳ ಸಾಗಣೆಗೆ ವಿಮಾನ ನಿಲ್ದಾಣದಲ್ಲಿ ವಿಶೇಷ ಶಿಷ್ಟಾಚಾರ (ಪ್ರೋಟೋಕಾಲ್‌) ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ ಮಲತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್‌ ವಿರುದ್ಧ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಾರಥ್ಯದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. ಇದೇ ಆರೋಪ ಹೊತ್ತಿರುವ ಕೆಳಹಂತದ ಪೊಲೀಸರ ವಿರುದ್ಧ ವಿಚಾರಣೆಗೆ ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಆದೇಶಿಸಿರುವ ಸರ್ಕಾರವು, ವಾರದಲ್ಲಿ ವಿಚಾರಣಾ ವರದಿ ಸಲ್ಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. 

ಈ ಮೂಲಕ ತಮ್ಮ ಮಲ ಮಗಳ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅ‍ವರಿಗೆ ತನಿಖೆ ಸಂಕಷ್ಟ ಎದುರಾಗಿದೆ. ಡಿಜಿಪಿ ರಾಮಚಂದ್ರರಾವ್‌ ಅವರ ವಿರುದ್ಧ ತನಿಖೆಗೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ನೇಮಿಸಿದ ಸರ್ಕಾರ, ಕೆಳಹಂತದ ಸಿಬ್ಬಂದಿ ವಿಚಾರಣೆ ಹೊಣೆಗಾರಿಕೆಯನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಅವರಿಗೆ ನೀಡಿದೆ. 

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ಸಹಕಾರಿ ಬ್ಯಾಂಕಿಂದ ನಟಿ ರನ್ಯಾ ರಾವ್‌ಗೆ ಸಿಕ್ಕಿತ್ತು 10 ಲಕ್ಷ!

ದುಬೈನಿಂದ ಚಿನ್ನ ಸಾಗಣೆ ಕೃತ್ಯದಲ್ಲಿ ತನ್ನ ಮಲ ತಂದೆ ಡಿಜಿಪಿ ರಾಮಚಂದ್ರರಾವ್ ಹಾಗೂ ತಮ್ಮ ಕುಟುಂಬದ ಆಪ್ತರಾಗಿರುವ ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಯೊಬ್ಬರ ಹೆಸರನ್ನು ರನ್ಯಾ ಬಳಸಿಕೊಂಡಿದ್ದರು ಎಂಬ ಆರೋಪವಿದೆ. ಈ ವಿಶೇಷ ಶಿಷ್ಟಾಚಾರ ಸೌಲಭ್ಯ ಕಾರಣಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದಿಳಿದಾಗ ರನ್ಯಾ ರಾವ್ ರನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿರಲಿಲ್ಲ. ಇದರಿಂದ ನಿರ್ಭೀತಿಯಿಂದ ಅವರು ಚಿನ್ನ ಸಾಗಿಸಲು ಅನುಕೂಲವಾಗಿತ್ತು ಎಂದು ಆಪಾದನೆ ಬಂದಿದೆ.

ಹೆಡ್‌ ಕಾನ್‌ಸ್ಟೇಬಲ್ ವಿಚಾರಣೆ ನಡೆಸಿದ್ದ ಡಿಆರ್‌ಐ: ಈ ಶಿಷ್ಟಾಚಾರ ದುರ್ಬ‍ಳಕೆ ಆರೋಪಕ್ಕೆ ಪೂರಕವಾಗಿ ದುಬೈನಿಂದ ರನ್ಯಾ ಚಿನ್ನ ಹೊತ್ತು ಬಂದಿದ್ದಾಗ ಅವರನ್ನು ಕರೆ ತರಲು ತೆರಳಿದ್ದ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಆ ವೇಳೆ ಡಿಜಿಪಿ ಪುತ್ರಿ ಎಂಬ ಕಾರಣಕ್ಕೆ ಅಧಿಕಾರಿಗಳ ಸೂಚನೆ ಮೇರೆಗೆ ಅವರನ್ನು ಕರೆತರಲು ವಿಮಾನ ನಿಲ್ದಾಣದೊಳಗೆ ಬಂದಿದ್ದಾಗಿ ಬಸವರಾಜು ಹೇಳಿಕೆ ಕೊಟ್ಟಿದ್ದರು ಎಂದು ತಿಳಿದು ಬಂದಿತ್ತು.

ನಟಿ ರನ್ಯಾ ರಾವ್‌ ಜೊತೆ ನಂಟು ಹೊಂದಿರುವ ಸಚಿವರ ಹೆಸರು ಹೇಳಿ: ಪ್ರತಿಪಕ್ಷ

ಪ್ರೋಟೋಕಾಲ್‌ ದುರ್ಬಳಕೆ
* ಚಿನ್ನ ಕಳ್ಳಸಾಗಣೆಗೆ ವಿಮಾನ ನಿಲ್ದಾಣದಲ್ಲಿ ವಿಶೇಷ ಶಿಷ್ಟಾಚಾರ ದುರ್ಬಳಕೆ ವಿಷಯದಲ್ಲಿ ಪೊಲೀಸರ ನಿಯಮ ಉಲ್ಲಂಘನೆ ಬಗ್ಗೆ ಸಿಐಡಿ ತನಿಖೆ
* ಇದೇ ಪ್ರಕರಣದಲ್ಲಿ ರನ್ಯಾ ಮಲತಂದೆ ರಾಮಚಂದದ್ರಾವ್‌ ವಿರುದ್ಧ ತನಿಖೆಗೆ ಎಐಎಸ್‌ ಅಧಿಕಾರಿ ಗೌರವ್‌ ಗುಪ್ತಾ ನೇತೃತ್ವದಲ್ಲಿ ತನಿಖೆ ಆದೇಶ
* ಎರಡೂ ಪ್ರಕರಣಗಳಲ್ಲಿ ಒಂದು ವಾರದಲ್ಲಿ ನೀಡುವಂತೆ ರಾಜ್ಯ ಸರ್ಕಾರ ಆದೇಶ
* ಚಿನ್ನ ಕಳ್ಳಸಾಗಣೆ ಕೇಸಲ್ಲಿ ಇದೀಗ ಅಪ್ಪ- ಮಗಳಿಗೆ ಸಂಕಷ್ಟ