ಬೆಂಗಳೂರು[ಫೆ.02]: ದಕ್ಷಿಣ ಭಾರತದಲ್ಲಿ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಐಸಿಸ್‌ ಬಲವರ್ಧನೆಗೆ ಸಜ್ಜಾಗಿದ್ದ ‘ಜಿಹಾದಿ ಗ್ಯಾಂಗ್‌’ ಬಂಧನ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಿದೆ.

ಈ ಆದೇಶ ಹೊರ ಬಿದ್ದ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳವು (ಎಟಿಸಿ), ಪ್ರಕರಣದ ಎಲ್ಲ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಹಾಗೆಯೇ ತಾನು ಬಂಧಿಸಿದ್ದ ಐಸಿಸ್‌ ಸಂಘಟನೆಯ ಕರ್ನಾಟಕದ ಕಮಾಂಡರ್‌ ಎನ್ನಲಾದ ಸದ್ದುಗುಂಟೆಪಾಳ್ಯದ ಮೆಹಬೂಬ್‌ ಪಾಷ, ಆತನ ಸಹಚರರಾದ ಕೋಲಾರದ ಸಲೀಂ ಖಾನ್‌ ಹಾಗೂ ಮೊಹಮ್ಮದ್‌ ಮನ್ಸೂರ್‌ ಸೇರಿ ಐವರು ಶಂಕಿತರನ್ನೂ ಎನ್‌ಐಎ ಸುಪರ್ದಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಗ್ಯಾಂಗ್‌ನ ಜಾಲವು ಕರ್ನಾಟಕ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಡಿಕೊಂಡಿದ್ದು, ನಾಲ್ಕು ರಾಜ್ಯಗಳ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಹೀಗಾಗಿ ಅಂತರ್‌ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾದ ಕಾರಣಕ್ಕೆ ಎನ್‌ಐಎ ವಹಿಸಿ ಸರ್ಕಾರ ಆದೇಶಿಸಿದೆ.

ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ ಹಾಗೂ ತರಬೇತಿಗೆ ತಮಿಳುನಾಡು ಮೂಲದ ಶಂಕಿತ ಉಗ್ರ ಖಾಜಾ ಮೋಹಿದ್ದೀನ್‌ ತಯಾರಿ ನಡೆಸಿದ್ದ. ಇದಕ್ಕಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ‘ಜಿಹಾದಿ ಗ್ಯಾಂಗ್‌’ ಕಟ್ಟಿದ್ದ. ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮೆಹಬೂಬ್‌ ಪಾಷ ಸೇರಿ ಕೆಲವರಿಗೆ ಸಂಘಟನೆ ಜವಾಬ್ದಾರಿಯನ್ನೂ ವಹಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಕೇಂದ್ರ ಗುಪ್ತದಳ, ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು, ಜ.8 ರಂದು ಬೆಂಗಳೂರಿನಲ್ಲಿ ಖಾಜಾನ ಮೂವರು ಬೆಂಬಲಿಗರನ್ನು ಬಂಧಿಸಿದ್ದರು. ಮರುದಿನ ದೆಹಲಿ ಪೊಲೀಸರು, ಖಾಜಾ ಮೊಯಿದ್ದೀನ್‌ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದರು. ಹೀಗೆ ಎರಡು ವಾರಗಳ ಕಾರ್ಯಾಚರಣೆಯಲ್ಲಿ ಕರ್ನಾಟಕದ ಐಸಿಸ್‌ ಕಮಾಂಡರ್‌ ಎನ್ನಲಾದ ಮೆಹಬೂಬ್‌ ಪಾಷ ಸೇರಿ 15 ಮಂದಿ ಬಂಧನವಾಗಿತ್ತು.