ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ನಾಟಕ ಸರ್ಕಾರವು ನಗದು ಬಹುಮಾನವನ್ನು ಮಂಜೂರು ಮಾಡಿದೆ.
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ವಿವಿಧ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಬಹುಮಾನವನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.
ಡಿಜಿ ಮತ್ತು ಐಜಿಪಿ ದರ್ಜೆ ಅಧಿಕಾರಿಗಳಿಗೆ ತಲಾ 20 ಸಾವಿರದಂತೆ ಒಟ್ಟು 25 ಲಕ್ಷ ರು, ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ(ರಾಜ್ಯ ವ್ಯಾಪ್ತಿ) ಅಧಿಕಾರಿಗಳಿಗೆ ತಲಾ 8 ಸಾವಿರದಂತೆ ಒಟ್ಟು 3 ಲಕ್ಷ ರು, ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗೆ ತಲಾ 5 ಸಾವಿರದಂತೆ ಒಟ್ಟು 2 ಲಕ್ಷ ರು. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5 ಸಾವಿರದಂತೆ ಒಟ್ಟು 1 ಲಕ್ಷ ನಗದನ್ನು ಒಳ ಆಡಳಿತ ಇಲಾಖೆ ಮಂಜೂರು ಮಾಡಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿ ಇನ್ನಿತರ ಪ್ರಕರಣಗಳನ್ನು ಸಮರ್ಥವಾಗಿ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆಕೊಡಿಸುವಲ್ಲಿ ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಇವರಿಗೆ ಒಟ್ಟಾರೇ 35 ಲಕ್ಷ ನಗದು ಬಹುಮಾನವನ್ನು ಮಂಜೂರು ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ:
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನೆ ಕೆಲಸದ ಮಹಿಳೆ ಮೇಲಿನ ಅ*ತ್ಯಾ*ಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆಗಸ್ಟ್ 2025 ರಲ್ಲಿ ಈ ತೀರ್ಪು ಹೊರಬಿದ್ದಿದ್ದು, ಶಿಕ್ಷೆಯ ಜೊತೆಗೆ ₹11.6 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಆದರೆ ಜಾಮೀನು ಮತ್ತು ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಿರಾಕರಿಸಿದೆ.
ಎಸ್ ಐ ಟಿ ಮುಖ್ಯಸ್ಥ ಬಿಕೆ ಸಿಂಗ್, ಡಿಐಜಿ ಸೀಮಾ ಲಾಟ್ಕರ್,ಎಸ್ ಪಿ ಸುಮನ್ ಡಿ ಪೆನ್ನೇಕರ್, ಎಸ್ ಪಿ ಸಿಎ ಸೈಮನ್,ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ಇನ್ಸ್ಪೆಕ್ಟರ್ ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿಂದತೆ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಲಾಗಿದೆ.


