'ರಾಸಲೀಲೆ' ವಿಡಿಯೋ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ಮರುನೇಮಕ ಮಾಡಲಾಗಿದೆ.

ಬೆಂಗಳೂರು (ಮೇ 06): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ರಾಸಲೀಲೆ' ಪ್ರಕರಣದ ಆರೋಪಿ, ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ (IPS: 1993) ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೂಲಕ ವಿವಾದಿತ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜನೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Add Asianetnews Kannada as a Preferred SourcegooglePreferred

ಏನಿದು ಪ್ರಕರಣ?

ಕೆಲವು ತಿಂಗಳ ಹಿಂದೆ ಡಿಜಿಪಿ ದರ್ಜೆಯ ಅಧಿಕಾರಿಯಾಗಿದ್ದ ಕೆ. ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಮತ್ತು 'ರಾಸಲೀಲೆ' ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಕಚೇರಿಯಂತಹ ಪವಿತ್ರ ಜಾಗದಲ್ಲಿ ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಇಂತಹ ಕೃತ್ಯವೆಸಗಿರುವುದು ಇಡೀ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಜನವರಿ 19, 2026 ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತ್ತು.

ಅಮಾನತು ರದ್ದತಿ ಮತ್ತು ಮರು ನಿಯೋಜನೆ:

ಸರ್ಕಾರದ ಇತ್ತೀಚಿನ ಆದೇಶದಂತೆ (DPAR 26 SPS 2026, ದಿನಾಂಕ: 06.05.2026), ರಾಮಚಂದ್ರ ರಾವ್ ಅವರ ಅಮಾನತನ್ನು ರದ್ದುಪಡಿಸಲಾಗಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಗೆ ಮರುಸೇರ್ಪಡೆಗೊಳಿಸಲಾಗಿದ್ದು, 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ನೇಮಿಸಲಾಗಿದೆ. ವಿಶೇಷವೆಂದರೆ, ಈ ಹುದ್ದೆಯನ್ನು ಸಿಐಡಿ (CID) ಡಿಜಿಪಿ ಹುದ್ದೆಗೆ ಸಮಾನವೆಂದು ಪರಿಗಣಿಸಿ ಸರ್ಕಾರ ಅವರಿಗೆ ಮತ್ತೆ ಪವರ್‌ಫುಲ್ ಸ್ಥಾನವನ್ನೇ ನೀಡಿದೆ.

ಸರ್ಕಾರದ ಆದೇಶದ ಸಾರಾಂಶ:

ಮಾರ್ಚ್ 18, 2026 ರಂದು ರಾಮಚಂದ್ರ ರಾವ್ ಅವರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಹಠಾತ್ ಆಗಿ ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳ ಅಡಿಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ರಾಜಭವನದ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಅವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ:

ಗಂಭೀರವಾದ ನೈತಿಕ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ಅಥವಾ ವಿವಾದದ ಕಾವು ಆರುವ ಮೊದಲೇ ಮತ್ತೆ ಇಂತಹ ಉನ್ನತ ಹುದ್ದೆಗೆ ನಿಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ವಿಡಿಯೋ ಸಾಕ್ಷ್ಯಗಳಿದ್ದರೂ ಸರ್ಕಾರ ಇಂತಹ ಮೃದು ಧೋರಣೆ ತೋರುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.

ಒಟ್ಟಾರೆಯಾಗಿ, ಜನವರಿ ತಿಂಗಳಲ್ಲಿ ಸಸ್ಪೆಂಡ್ ಆಗಿದ್ದ ರಾಮಚಂದ್ರ ರಾವ್, ಮೇ ತಿಂಗಳಿನಲ್ಲಿ ಮತ್ತೆ 'ಡಿಜಿಪಿ' ಎಂಬ ಗತ್ತು-ಗೈರತ್ತಿನೊಂದಿಗೆ ಪೊಲೀಸ್ ಇಲಾಖೆಯ ಮುಖ್ಯವಾಹಿನಿಗೆ ಮರಳಿದ್ದಾರೆ.