ಡಿಜಿಪಿ ರಾಮಚಂದ್ರ ರಾವ್ ಅವರ ವಿವಾದಾತ್ಮಕ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಆರೋಪವನ್ನು ಸುಳ್ಳು ಮತ್ತು ಫ್ಯಾಬ್ರಿಕೇಟೆಡ್ ಎಂದು ತಳ್ಳಿಹಾಕಿರುವ ರಾಮಚಂದ್ರ ರಾವ್, ರಜೆಯ ಮೇಲೆ ತೆರಳಿದೆ.

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿವಾದಾತ್ಮಕ ವಿಡಿಯೋ ಪ್ರಕರಣ ರಾಜ್ಯ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಅವಮಾನಕರ ಪ್ರಕರಣಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಜಿಪಿ ರಾಮಚಂದ್ರ ರಾವ್ ತಕ್ಷಣ ಅಮಾನತು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆ ಕಾಪಾಡುವ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಜೆ ಮೇಲೆ ತೆರಳಿದ ರಾಮಚಂದ್ರ ರಾವ್

ವಿವಾದ ಉಂಟಾದ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅವರು 10 ದಿನಗಳ ರಜೆಗೆ ತೆರಳಿದ್ದಾರೆ. ಈ ಅವಧಿಯಲ್ಲಿ ಅವರು ಕಚೇರಿಗೆ ಗೈರಾಗುವ ಬಗ್ಗೆ ತಮ್ಮ ಸಿಬ್ಬಂದಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದಾರೆ. ಸದ್ಯ ರಾಮಚಂದ್ರ ರಾವ್ ಯಾವುದೇ ಕರೆಗಳನ್ನು ಸ್ವೀಕರಿಸದೇ ದೂರ ಉಳಿದಿದ್ದಾರೆ ಎಂಬುದೂ ತಿಳಿದು ಬಂದಿದೆ.

ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಲು ಯತ್ನ

ಈ ಪ್ರಕರಣದ ಕುರಿತು ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ರಾಮಚಂದ್ರ ರಾವ್ ಭೇಟಿ ಮಾಡಲು ಯತ್ನಿಸಿದ್ದರು. ಆದರೆ, ಸಚಿವರು ಈ ಭೇಟಿಯನ್ನು ನಿರಾಕರಿಸಿದರು. ಇದರಿಂದಾಗಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ವೀಡಿಯೋ ಸುಳ್ಳು, ಫ್ಯಾಬ್ರಿಕೇಟೆಡ್ ರಾಮಚಂದ್ರ ರಾವ್

ಇದಕ್ಕೂ ಮುನ್ನ ವೈರಲ್ ಆಗಿರುವ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ರಾಮಚಂದ್ರ ರಾವ್, ಇದು ಸಂಪೂರ್ಣವಾಗಿ ಸುಳ್ಳು ಮತ್ತು ಫ್ಯಾಬ್ರಿಕೇಟೆಡ್ ಎಂದಿದ್ದಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಏನು ಬೇಕಾದರೂ ಮಾಡಬಹುದಾದ ಪರಿಸ್ಥಿತಿ ಇದೆ. ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಈಗ ಹರಿದಾಡುತ್ತಿರುವ ವಿಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದು ನನಗೂ ಶಾಕ್ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಕಾನೂನು ಸಲಹೆ ಪಡೆಯಲಿದ್ದೇನೆ. ವೀಡಿಯೋ ಹೇಗೆ ನಿರ್ಮಾಣಗೊಂಡಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವನ್ನು ಗೃಹ ಸಚಿವರಿಗೆ ತಿಳಿಸಲು ಬಂದಿದ್ದೆ. ಆದರೆ ಇದರಲ್ಲಿ ನನಗೆ ಯಾವುದೇ ಪಾತ್ರವಿಲ್ಲ. ಈ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ರಾಮಚಂದ್ರ ರಾವ್ ತಿಳಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಲು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ವೀಡಿಯೋ ನಿರ್ಮಾಣ, ಅದರ ಮೂಲ ಹಾಗೂ ಹರಡುವಿಕೆಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ರಾಮಚಂದ್ರ ರಾವ್ ಹೇಳಿದ್ದಾರೆ

ರಾಜ್ಯ ರಾಜಕೀಯದಲ್ಲಿ ಸಂಚಲನ

ಒಟ್ಟಿನಲ್ಲಿ, ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಇಂತಹ ಗಂಭೀರ ಆರೋಪಗಳು ಕೇಳಿಬಂದಿರುವುದು ರಾಜ್ಯ ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಕ್ಷಣದ ಪ್ರತಿಕ್ರಿಯೆ ಹಾಗೂ ಅಮಾನತು ಸೂಚನೆಯಿಂದ ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.