ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021  ಸಿದ್ಧ ಕಂದಾಯ ಸಚಿವ ಆರ್‌. ಅಶೋಕ್‌ ಮಾಹಿತಿ ಮುಂಗಾರು ಪೂರ್ವ ಸಿದ್ಧತೆ ಕುರಿತು ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ

 ಬೆಂಗಳೂರು (ಜೂ.08): ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದ ಅನುಭವ, ಕಲಿತ ಪಾಠ ಹಾಗೂ ದೇಶದ ವಿವಿಧೆಡೆಗಳಲ್ಲಿ ಪ್ರವಾಹ ನಿರ್ವಹಣೆಯಲ್ಲಿ ಕೈಗೊಂಡ ಉತ್ತಮ ಕಾರ್ಯಗಳನ್ನು ಕ್ರೋಡೀಕರಿಸಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021 ಅನ್ನು ಸಿದ್ಧಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಮುಂಗಾರು ಪೂರ್ವ ಸಿದ್ಧತೆ ಕುರಿತು ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿ, ಪ್ರವಾಹ ನಿರ್ವಹಣೆ ಕಾರ್ಯವನ್ನು ಮಾಡುವಂತೆ ಸೂಚಿಸಲಾಗಿದೆ. ಅಣೆಕಟ್ಟು ನಿರ್ವಹಣೆ ಹಾಗೂ ಮಾಹಿತಿ ವಿನಿಮಯಕ್ಕೆ ಅಂತಾರಾಜ್ಯ ಸಮನ್ವಯತೆ ಸಾಧಿ​ಸಲಾಗಿದೆ. ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿ: ಅಪಾಯದಲ್ಲಿರುವ 600ಕ್ಕೂ ಅಧಿಕ ಮನೆಗಳಿಗೆ ನೋಟಿಸ್‌ ..

ಯೋಜನೆಯಲ್ಲೇನಿದೆ?: ಹವಾಮಾನ ಇಲಾಖೆ ಪ್ರಕಾರ 23 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ತ್ವರಿತಗತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿ ಸಿದ್ದಪಡಿಸುತ್ತಿರುವ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆಯಲ್ಲಿ ರಾಜ್ಯದ ಒಟ್ಟು 1710 ಗ್ರಾಮಗಳನ್ನು ಪ್ರವಾಹಪೀಡಿತ ಅಥವಾ ತುತ್ತಾಗುವ ಪ್ರದೇಶಗಳು ಎಂದು ಗುರುತಿಸಲಾಗಿದೆ. 758 ಗ್ರಾಮಗಳು ತೀವ್ರ ಪ್ರವಾಹ ಪರಿಸ್ಥಿತಿ ಹಾಗೂ 952 ಗ್ರಾಮಗಳಲ್ಲಿ ಮಧ್ಯಮ ಪ್ರವಾಹ ಪರಿಸ್ಥಿತಿಗೆ ತುತ್ತಾಗುವ ಗ್ರಾಮಗಳು ಎಂದು ವರ್ಗೀಕರಿಸಲಾಗಿದೆ ಎಂದು ಅಶೋಕ್‌ ಹೇಳಿದರು.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌! .

ನಾಲ್ಕು ಎನ್‌ಡಿಆರ್‌ಎಫ್‌ ತಂಡಗಳನ್ನು ವಿಕೋಪ ನಿರ್ವಹಣೆಗೆ ಪೂರ್ವ ನಿಯೋಜನೆ ಮಾಡಲಾಗಿದೆ. ಸುಮಾರು 400ಕ್ಕೂ ಹೆಚ್ಚು ಎಸ್‌ಡಿಆರ್‌ಎಫ್‌ ತಂಡಗಳನ್ನು ತುರ್ತು ಪರಿಹಾರ ಪರಿಕರ ಸಾಮಗ್ರಿಗಳೊಂದಿಗೆ ಸನ್ನದ್ಧಗೊಳಿಸಲಾಗಿದೆ. ಪ್ರತಿವಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಿ, ಮಳೆ, ಬೆಳೆ ಹಾಗೂ ಜಲ ಸಂಪನ್ಮೂಲಗಳ ಪರಿಸ್ಥಿತಿ ಅವಲೋಕನ ಮಾಡಿ ಸಂಬಂಧಪಟ್ಟಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮಳೆಯಾದರೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಹೀಗಾಗಿ ಗಡಿ ಭಾಗದಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತವಾಗಲಿದೆ. ಅದಕ್ಕಾಗಿ ಅಲ್ಲಿ ಸಮೀಕ್ಷೆ ಮಾಡಲಾಗಿದೆ. ಗುಡ್ಡಗಳು ಬಿರುಕು ಬಿಟ್ಟಿರುವ ಬಗ್ಗೆ ಸಮೀಕ್ಷೆ ಮಾಡುವಂತೆ ತಿಳಿಸಲಾಗಿದೆ. ನದಿಗಳು ಹರಿಯುವ ಸ್ಥಳಗಳಲ್ಲಿನ ಜನರನ್ನು ಸ್ಥಳಾಂತರ ಮಾಡುವಂತೆಯೂ ತಿಳಿಸಲಾಗಿದೆ. 912 ಗ್ರಾಮಗಳನ್ನು ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಜಾನುವಾರುಗಳ ರಕ್ಷಣೆಗಾಗಿಯೂ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ಸೇತುವೆಗಳ ಮೇಲೆ ಒಂದು ಅಡಿ ನೀರು ಹರಿದರೆ ಅಲ್ಲಿ ವಾಹನಗಳು ಓಡಾಡಲು ಬಿಡಬಾರದು ಎಂದು ಸೂಚನೆ ನೀಡಲಾಗಿದೆ ಎಂದರು.