ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್!
ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್| ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆಯ ನಿರೀಕ್ಷೆ| ಜುಲೈ- ಆಗಸ್ಟ್‌ನಲ್ಲಿ ಕರ್ನಾಟಕದ ಕೆಲವೆಡೆ ಮಳೆ ಕೊರತೆ
ನವದೆಹಲಿ(ಏ.15): ಕೊರೋನಾ ಆತಂಕದ ಮಧ್ಯೆಯೇ ರೈತರಿಗೊಂದು ಸಿಹಿ ಸುದ್ದಿ. ಕಳೆದ ಎರಡು ವರ್ಷದಂತೆ ಈ ಬಾರಿಯೂ ನೈಋುತ್ಯ ಮುಂಗಾರು ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿ ಇರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.
ಉತ್ತರ ಭಾರತದ ಬಯಲು ಪ್ರದೇಶ ಪ್ರದೇಶ ಹಾಗೂ ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಆಗುವ ಸಾಧ್ಯತೆ ಇದೆ. ಕರ್ನಾಟಕ ಒಳನಾಡು ಪ್ರದೇಶಗಳು ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಯ ಕೊರತೆ ಎದುರಾಗಬಹುದು. ಆದರೆ, ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ದೇಶದೆಲ್ಲೆಡೆ ಉತ್ತಮ ಮಳೆಯ ಮುನ್ಸೂಚನೆ ದೊರೆತಿದೆ. ಒಟ್ಟಾರೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೀರ್ಘಕಾಲಿನ ಸರಾಸರಿಯ ಶೇ.103ರಷ್ಟುಮಳೆ ಸುರಿಯಲಿದೆ ಎಂದು ಸ್ಕೈಮೆಟ್ ಅಧ್ಯಕ್ಷ ಜಿ.ಪಿ. ಶರ್ಮಾ ತಿಳಿಸಿದ್ದಾರೆ.
ಇದೇ ವೇಳೆ ಜೂನ್‌ನಲ್ಲಿ ಶೇ.106ರಷ್ಟುಮಳೆ ಆಗುವ ನಿರೀಕ್ಷೆ ಇದ್ದು, ಜುಲೈನಲ್ಲಿ ಶೇ.97ರಷ್ಟುಮಳೆ ಆಗಲಿದೆ. ಅದೇ ರೀತಿ ಆಗಸ್ಟ್‌ನಲ್ಲಿ ಶೇ.99ರಷ್ಟುಹಾಗೂ ಸೆಪ್ಟೆಂಬರ್‌ನಲ್ಲಿ ಶೇ.116ರಷ್ಟುಮಳೆ ಆಗಲಿದೆ. ಸಾಮಾನ್ಯ ಮುಂಗಾರು ಆಗುವ ಸಾಧ್ಯತೆ ಶೇ.60ರಷ್ಟುಇದ್ದರೆ, ಶೇ.15ರಷ್ಟುಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಅಂದಾಜಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಸಾಮಾನ್ಯ ಮುಂಗಾರು ಸುರಿದಿತ್ತು. ಈ ವರ್ಷವೂ ಎಲ್ ನಿನೋ ವಿದ್ಯಮಾನದ ಅಪಾಯ ದೂರವಾಗಿರುವುದರಿಂದ ಸಾಮಾನ್ಯ ಮುಂಗಾರಿನ ಸೂಚನೆ ದೊರೆತಿದೆ.