ಬೆಂಗಳೂರು(ಜೂ.06): ಕರಾವಳಿ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಮುಂದುವರಿದಿದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಮುಂಗಾರು ಅಬ್ಬರ ಕಡಿಮೆಯಾಗಿದ್ದರೂ ಉತ್ತರ ಕರ್ನಾಟಕದ ಒಂದೆರಡು ಜಿಲ್ಲೆಗಳಲ್ಲಿ ಕೆಲಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಈ ಮೂಲಕ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಮಳೆಗೆ ಹೋಲಿಸಿದರೆ ಶನಿವಾರ ಮುಂಗಾರು ಅಬ್ಬರ ಕ್ಷೀಣಿಸಿತ್ತು. ಮೂರೂ ಜಿಲ್ಲೆಗಳಲ್ಲಿ ದಿನವಿಡೀ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಿದೆ. ಮಂಗಳೂರಲ್ಲಿ ನಗರದ ಅಪಾರ್ಟ್‌ಮೆಂಟ್‌ವೊಂದರ ತಡೆಗೋಡೆ ಕುಸಿದು ಆತಂಕ ಸೃಷ್ಟಿಯಾಗಿತ್ತಾದರೂ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನು ಹೊರತುಪಡಿಸಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.

ಇನ್ನು ಬೆಳಗಾವಿ, ಬಾಗಲಕೋಟೆಯಲ್ಲಿ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಇದೇ ವೇಳೆ, ಬೆಂಗಳೂರಿನಲ್ಲೂ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಶುಕ್ರವಾರ ಸಹ ಭಾರೀ ಮಳೆ ಸುರಿದಿತ್ತು. ಇನ್ನು ಗದಗ ಜಿಲ್ಲೆಯ ಹಲವೆಡೆ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸುಮಾರು ಒಂದು ಗಂಟೆವರೆಗೆ ಸಾಧಾರಣ ಮಳೆ ಸುರಿದಿದೆ.

ರಾಜ್ಯಕ್ಕೆ ನೈರುತ್ಯ ಮುಂಗಾರು ಎಂಟ್ರಿ: ವಾಡಿಕೆಗಿಂತೆ ಈ ಬಾರಿ ಹೆಚ್ಚು ಮಳೆ ನಿರೀಕ್ಷೆ

ಉತ್ತರ ಒಳನಾಡಿನ ಹಲವು ಕಡೆ ಭಾರೀ ಮಳೆ ಸಾಧ್ಯತೆ

ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಶನಿವಾರ ಮುಂಗಾರು ಪ್ರವೇಶವಾಗಿದ್ದು, ಭಾನುವಾರ ಬಹುತೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಹಾವೇರಿ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ಬಾಗಲಕೋಟೆ ಕೆಲವು ಕಡೆ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಶುಕ್ರವಾರ ನೈಋುತ್ಯ ಮುಂಗಾರು ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರವೇಶಿಸಿದ್ದು, ಆ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಅಂತೆಯೆ ಉತ್ತರ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮಳೆಯಾಗಿದೆ. ಜೂನ್‌ 6ರಿಂದ ರಾಜ್ಯದ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಮಳೆಯ ಪ್ರಮಾಣ ತಾತ್ಕಾಲಿಕವಾಗಿ ಕುಗ್ಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.