ಬೆಂಗಳೂರು (ಏ.15):  ರಾಜ್ಯದಲ್ಲಿ ಕೋವಿಡ್‌-19ರ ಹಾವಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಮಾಸ ರಂಜಾನ್‌ಗೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಈ ಮಾರ್ಗಸೂಚಿಯ ಪ್ರಕಾರ ಕಂಟೈನ್ಮೆಂಟ್‌ ವಲಯದಲ್ಲಿನ ಮಸೀದಿಗಳನ್ನು ಬಂದ್‌ ಮಾಡಬೇಕಿದೆ. ಉಳಿದ ಮಸೀದಿಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧಾರಣೆ ಕಡ್ಡಾಯಗೊಳಿಸಲಾಗಿದೆ.

ಮಸೀದಿಗಳಲ್ಲಿ ನಮಾಜ್‌ ಮಾಡುವಾಗ ಒಂದು ಕಾರ್ಪೆಟ್‌ ಅನ್ನು ಒಬ್ಬರೇ ಬಳಸಬೇಕು. ನಮಾಜ್‌ ಮಾಡುವ ಸ್ಥಳದಲ್ಲಿ ಮಾರ್ಕ್ ಹಾಕಬೇಕು. ಮೂರು ಪಾಳಿಯಲ್ಲಿ ನಮಾಜ್‌ ಮಾಡಬೇಕು. ಇಫ್ತಾರ್‌ ಕೂಟಗಳನ್ನು ಮನೆಯಲ್ಲೇ ಆಯೋಜಿಸಬೇಕು. 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ನಮಾಜ್‌ ಮಾಡಬೇಕು. ಮಸೀದಿಗೆ ಆಗಮಿಸಲು ಮತ್ತು ನಿರ್ಗಮಿಸಲು ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

'ಲಾಕ್ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಾಮೂಹಿಕ ನಮಾಜ್‌, ಜಾತ್ರೆ, ರ‍್ಯಾಲಿ ನಿಷೇಧಿಸಿ!'

ನಮಾಜ್‌ ಮುಗಿದ ತಕ್ಷಣ ಮಸೀದಿಯ ಬಾಗಿಲು ಮುಚ್ಚಬೇಕು. ನಮಾಜ್‌ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕವನ್ನು ಸಿಂಪಡಿಸಬೇಕು. ಕೋವಿಡ್‌ನ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ, ಉಸಿರಾಟ ತೊಂದರೆ ಇದ್ದವರು ಮಸೀದಿ ಪ್ರವೇಶಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ರಂಜಾನ್‌ ಮಾಸವು ಏಪ್ರಿಲ್‌ 14ರಿಂದ ಆರಂಭವಾಗಿದ್ದು ಮೇ 12ರವರೆಗೆ ಇರಲಿದೆ.