ಬೆಂಗಳೂರು(ಮಾ.24): ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಸೇರುವ ಜಾತ್ರೆಗಳು, ಮಸೀದಿಗಳಲ್ಲಿನ ಸಾಮೂಹಿಕ ಪ್ರಾರ್ಥನೆ, ಹೊಸ ಸಿನಿಮಾಗಳ ಪ್ರಮೋಷನ್‌ಗಾಗಿ ನಡೆಯುವ ರೋಡ್‌ ಶೋಗಳನ್ನು ನಿಷೇಧಿಸಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಏರಿಕೆ ಗತಿಯಲ್ಲಿರುವ ಈ ಹಂತದಲ್ಲಿ ಇಂತಹ ಕಾರ್ಯಕ್ರಮಗಳಿಂದ ವಿಪರೀತ ಹಾನಿಯಾಗುತ್ತದೆ. ಹೀಗಾಗಿ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದರು.

ದೇವಸ್ಥಾನಗಳಲ್ಲಿ ಟ್ರಸ್ಟಿಗಳು ಸೇರಿದಂತೆ ಸಂಬಂಧಪಟ್ಟವರು ಮಾತ್ರ ಪೂಜೆ, ರಥ ಎಳೆಯುವುದು ಮುಂತಾದ ಕಾರ್ಯಗಳನ್ನು ನೆರವೇರಿಸಲಿ. ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಬಾರದು. ಏಪ್ರಿಲ್‌ ತಿಂಗಳಲ್ಲಿ ರಂಜಾನ್‌ ಬರಲಿರುವ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿನ ಸಾಮೂಹಿಕ ಪ್ರಾರ್ಥನೆ ಚಟುವಟಿಕೆಗಳಿಗೆ ನಿರ್ಬಂಧ ಹಾಕಬೇಕು ಎಂದರು.

ಜತೆಗೆ, ಹೊಸ ಸಿನಿಮಾಗಳ ಪ್ರಚಾರದ ಭಾಗವಾಗಿ ಜಿಲ್ಲೆ ಜಿಲ್ಲೆಗಳಲ್ಲಿ ರೋಡ್‌ ಶೋ ನಡೆಯುತ್ತಿದೆ. ಹೀರೋ-ಹಿರೋಯಿನ್‌ಗಳ ಜೊತೆ ಸೆಲ್ಫಿ, ಆಟೋಗ್ರಾಫ್‌ಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್‌ಡೌನ್‌, ನೈಟ್‌ ಕಫä್ರ್ಯ ಮಾತ್ರ ಪರಿಹಾರವಲ್ಲ. ಲಾಕ್‌ಡೌನ್‌ ಕಳೆದ ವರ್ಷ ಆಗಿದೆ. ಆದರೆ ಪ್ರಕರಣ ಮಿತಿ ಮೀರಿದರೆ ಏನೂ ಹೇಳಲು ಸಾಧ್ಯವಿಲ್ಲ. ಮುಚ್ಚಿದ ಪ್ರದೇಶದಲ್ಲಿ ಗರಿಷ್ಠ 200 ಮಂದಿ, ತೆರೆದ ಪ್ರದೇಶಗಳಲ್ಲಿ ಗರಿಷ್ಠ 500 ಮಂದಿ ಸೇರಲು ಅವಕಾಶವಿದ್ದರೂ ಸಾಧ್ಯವಾದಷ್ಟುಕಡಿಮೆ ಪ್ರಮಾಣದಲ್ಲಿ ಜನ ಸೇರಬೇಕು. ಸರ್ಕಾರ ಕೊಟ್ಟಿರುವ ಮಾರ್ಗಸೂಚಿಗಳನ್ನು ನಮ್ಮ ಜನ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ ನಿಯಂತ್ರಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಇದೊಂದು ಸಾಮೂಹಿಕ ಹೊಣೆಗಾರಿಕೆ ಎಂದು ಡಾ. ಮಂಜುನಾಥ್‌ ತಿಳಿಸಿದರು.

ಜನ ಗುಂಪು ಸೇರುವುದನ್ನು ಬಿಡಬೇಕು. ಈಜುಕೊಳ, ಜಿಮ್‌ಗಳಲ್ಲಿ ಇಪ್ಪತ್ತು ಮೂವತ್ತು ಜನರಷ್ಟೇ ಸೇರುತ್ತಾರೆ. ಇದಕ್ಕಿಂತಲೂ ಹೆಚ್ಚು ಜನ ಸೇರುವಲ್ಲಿ ಕೋವಿಡ್‌ ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.

ಲಸಿಕೆ ಏರ್‌ ಬ್ಯಾಗ್‌ ಇದ್ದ ಹಾಗೆ!:

1918ರಲ್ಲಿ ಸ್ಪಾ್ಯನಿಷ್‌ ಫä್ಲ ಬಂದಾಗ ಎರಡು ವರ್ಷ ಅದರ ಹಾವಳಿಯಿತ್ತು. ಕೊರೋನಾ ಬಂದು ಒಂದೂವರೆ ವರ್ಷವಾಗಿದ್ದು ಇನ್ನು ಆರು ತಿಂಗಳು ಇದರ ಕಾಟ ಇರಲಿದೆ. ಕೊರೋನಾ ಸೋಂಕಿನ ನಿಯಂತ್ರಣ ಜನರ ಕೈಯಲ್ಲಿದೆ. ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರದ ಪಾಲನೆ ಆಗಬೇಕು. ಲಸಿಕೆ ಪಡೆದಿದ್ದರೂ ಕೋವಿಡ್‌ ಶಿಷ್ಟಾಚಾರಗಳನ್ನು ಪಾಲಿಸಬೇಕು. ಏಕೆಂದರೆ ಲಸಿಕೆ ಪಡೆದಿದ್ದರೂ ಸೋಂಕಿತರ ಸಂಪರ್ಕಕ್ಕೆ ಬಂದರೆ ಸೋಂಕು ಬರುವ ಸಾಧ್ಯತೆ ಇದೆ. ಲಸಿಕೆ ನೀಡುವ ಉದ್ದೇಶ ಸೋಂಕಿನ ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವುದಾಗಿದೆ. ಲಸಿಕೆ ಎಂಬುದು ಸೀಟ್‌ ಬೆಲ್ಟ್‌, ಏರ್‌ ಬ್ಯಾಗ್‌ ಇದ್ದ ಹಾಗೆ. ಆಕಸ್ಮಿಕವಾಗಿ ಅಪಘಾತವಾದರೆ ರಕ್ಷಣೆ ನೀಡುತ್ತದೆ ಎಂದು ಹೇಳಿದರು.