ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಒಟ್ಟು 20 ಸಾರ್ವತ್ರಿಕ ರಜೆಗಳು ಮತ್ತು 21 ಪರಿಮಿತ ರಜೆಗಳಿದ್ದು, ಕೊಡಗು ಜಿಲ್ಲೆಗೆ ವಿಶೇಷ ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ.
ಬೆಂಗಳೂರು: 2025 ಮುಗೀತು. ಹೊಸತನ ಹೊತ್ತು ಹೊಸ ವರ್ಷ 2026 ಬಂತು. ಈ ಹಿನ್ನೆಲೆಯಲ್ಲಿ ರಾಜ್ಯದ ಸಾರ್ವತ್ರಿಕ ರಜೆ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು 2025ರ ನವೆಂಬರ್ ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. 2026ನೇ ವರ್ಷಕ್ಕೆ ಒಟ್ಟು 20 ಸಾರ್ವತ್ರಿಕ ರಜೆಗಳು ಹಾಗೂ 21 ಪರಿಮಿತ (Restricted) ರಜೆಗಳು ಇರಲಿವೆ.
ಭಾನುವಾರ ಅಥವಾ ಎರಡನೇ ಶನಿವಾರಕ್ಕೆ ಬರುವ ಕೆಲವು ಪ್ರಮುಖ ಹಬ್ಬಗಳನ್ನು ಈ ಬಾರಿ ಸಾರ್ವತ್ರಿಕ ರಜೆ ಪಟ್ಟಿಯಿಂದ ಹೊರಗಿಡಲಾಗಿದೆ. ಅದರಂತೆ, ಮಹಾಶಿವರಾತ್ರಿ (ಫೆಬ್ರವರಿ 15), ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1), ನರಕ ಚತುರ್ದಶಿ (ನವೆಂಬರ್ 8) ಹಾಗೂ ಅಕ್ಟೋಬರ್ 10ರಂದು ಎರಡನೇ ಶನಿವಾರಕ್ಕೆ ಬರುವ ಮಹಾಲಯ ಅಮಾವಾಸ್ಯೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿಲ್ಲ.
ಕೊಡಗು ಜಿಲ್ಲೆಗೆ ವಿಶೇಷ ಸ್ಥಳೀಯ ರಜೆ
2026ನೇ ಸಾಲಿನಲ್ಲಿ ಕೆಲವು ಹಬ್ಬಗಳನ್ನು ಆಚರಿಸುವ ಸಲುವಾಗಿ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಅವುಗಳು:
ಸೆಪ್ಟೆಂಬರ್ 3 (ಗುರುವಾರ) – ಕೈಲ್ ಮೂಹೂರ್ತ
ಅಕ್ಟೋಬರ್ 18 (ಭಾನುವಾರ) – ತುಲಾ ಸಂಕ್ರಮಣ
ನವೆಂಬರ್ 26 (ಗುರುವಾರ) – ಹುತ್ತರಿ ಹಬ್ಬ
ಈ ರಜೆಗಳು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗಲಿದ್ದು, ಇತರ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ.
2026ರ ಸಾರ್ವತ್ರಿಕ ರಜೆಗಳ ಪಟ್ಟಿ
ಜನವರಿ 15 – ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ
ಜನವರಿ 26 – ಗಣರಾಜ್ಯೋತ್ಸವ
ಮಾರ್ಚ್ 19 – ಯುಗಾದಿ
ಮಾರ್ಚ್ 2 – ರಂಜಾನ್
ಮಾರ್ಚ್ 31 – ಮಹಾವೀರ ಜಯಂತಿ
ಏಪ್ರಿಲ್ 3 – ಗುಡ್ ಫ್ರೈಡೇ
ಏಪ್ರಿಲ್ 14 – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಏಪ್ರಿಲ್ 20 – ಬಸವ ಜಯಂತಿ
ಮೇ 1 – ಕಾರ್ಮಿಕ ದಿನಾಚರಣೆ
ಮೇ 28 – ಬಕ್ರೀದ್
ಜೂನ್ 26 – ಮೊಹರಂ (ಕಡೆ ದಿನ)
ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 26 – ಈದ್ ಮಿಲಾದ್
ಸೆಪ್ಟೆಂಬರ್ 14 – ವರಸಿದ್ಧಿ ವಿನಾಯಕ ವ್ರತ
ಅಕ್ಟೋಬರ್ 2 – ಗಾಂಧಿ ಜಯಂತಿ
ಅಕ್ಟೋಬರ್ 20 – ಆಯುಧ ಪೂಜೆ
ಅಕ್ಟೋಬರ್ 21 – ವಿಜಯದಶಮಿ
ನವೆಂಬರ್ 10 – ಬಲಿಪಾಡ್ಯಮಿ (ದೀಪಾವಳಿ)
ನವೆಂಬರ್ 27 – ಕನಕದಾಸ ಜಯಂತಿ
ಡಿಸೆಂಬರ್ 25 – ಕ್ರಿಸ್‌ಮಸ್
ಮುಸ್ಲಿಂ ಸಮುದಾಯದ ಹಬ್ಬಗಳಿಗೆ ವಿಶೇಷ ವ್ಯವಸ್ಥೆ
ಈ ರಜೆ ಪಟ್ಟಿಯಲ್ಲಿ ನಮೂದಿಸಿರುವ ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದಲ್ಲಿ, ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ನೌಕರರಿಗೆ ನಿಗದಿತ ರಜೆಯ ಬದಲು ಹಬ್ಬದ ನಿಜವಾದ ದಿನ ರಜೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
21 ಪರಿಮಿತ ರಜೆಗಳಿಗೆ ಮಂಜೂರಾತಿ
2026ನೇ ಸಾಲಿಗೆ 21 ಪರಿಮಿತ (Restricted) ರಜೆಗಳ ಪಟ್ಟಿಗೂ ಸರ್ಕಾರ ಅನುಮೋದನೆ ನೀಡಿದೆ. ಭಾನುವಾರಕ್ಕೆ ಬರುವ ತುಲಾ ಸಂಕ್ರಮಣ (ಅಕ್ಟೋಬರ್ 18) ರಜೆಯನ್ನು ಪರಿಮಿತ ರಜೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಅದೇ ರೀತಿ, ಸಾರ್ವತ್ರಿಕ ರಜೆ ದಿನಗಳಿಗೆ ಹೊಂದಿಕೊಂಡು ಬರುವ ಬುದ್ಧ ಪೂರ್ಣಿಮೆ ಸೇರಿದಂತೆ ಕೆಲವು ಹಬ್ಬಗಳನ್ನು ಪರಿಮಿತ ರಜೆ ಪಟ್ಟಿಯಿಂದ ಹೊರಗಿಡಲಾಗಿದೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳು 2026ನೇ ಸಾಲಿನ ಕಾರ್ಯಯೋಜನೆ ರೂಪಿಸಿಕೊಳ್ಳಲು ಈ ರಜೆ ಪಟ್ಟಿ ಮಾರ್ಗದರ್ಶಿಯಾಗಲಿದೆ.


