ಶ್ರೀಶೈಲ ಪೀಠದ ಶ್ರೀಗಳು, ರಾಜ್ಯದ ಸಂತ್ರಸ್ತರನ್ನು ಕಡೆಗಣಿಸಿ ಬೇರೆ ರಾಜ್ಯಗಳಿಗೆ ಸಹಾಯ ಮಾಡುವ ಸರ್ಕಾರದ ನೀತಿಯನ್ನು ಟೀಕಿಸಿದ್ದಾರೆ. ಹೊಸ ವರ್ಷಾಚರಣೆಯ ದುರಾಚರಣೆಗಳ ಬದಲು ಸದಾಚರಣೆಗೆ ಕರೆ ನೀಡಿದ್ದು, ಲಿಂಗಾಯತ ಮಠಾಧೀಶರು ಬೀದಿ ರಂಪಾಟ ನಿಲ್ಲಿಸಿ ಒಗ್ಗಟ್ಟಿನಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಬಾಗಲಕೋಟೆ (ಡಿ.31): ರಾಜ್ಯದ ಸಂತ್ರಸ್ತರ ವಿಚಾರದಲ್ಲಿ ಸರ್ಕಾರದ ತಾರತಮ್ಯ ಧೋರಣೆ, ಹೊಸ ವರ್ಷದ ಆಚರಣೆ ಹಾಗೂ ಲಿಂಗಾಯತ ಮಠಾಧೀಶರ ನಡುವಿನ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಶ್ರೀಶೈಲ ಪೀಠದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಇಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಮನೆಗೆದ್ದು ಮಾರು ಗೆಲ್ಲು ಎಂದ ಶ್ರೀಗಳು

ಕೋಗಿಲು ಪ್ರದೇಶದಲ್ಲಿ ಸರ್ಕಾರ ರಾಜ್ಯದ ಇತರೆ ಸಂತ್ರಸ್ತರನ್ನು ಕಡೆಗಣಿಸಿ ನೆರೆ ರಾಜ್ಯಗಳಿಗೆ ಸಹಾಯ ಹಸ್ತ ಚಾಚುತ್ತಿರುವ ಸರ್ಕಾರದ ನಿಲುವನ್ನು ಟೀಕಿಸಿದ ಶ್ರೀಗಳು, 'ಮೊದಲು ಮನೆಗೆದ್ದು ಮಾರು ಗೆಲ್ಲಬೇಕು' ಎಂಬ ಗಾದೆ ಮಾತಿನಂತೆ, ಸರ್ಕಾರ ಮೊದಲು ನಮ್ಮ ರಾಜ್ಯದ ಜನರ ಕಷ್ಟಗಳನ್ನು ಆಲಿಸಬೇಕು. ನಮ್ಮ ಆಡಳಿತದ ವ್ಯಾಪ್ತಿಗೆ ಬರುವ ಜನರ ನೋವನ್ನು ನಿವಾರಿಸುವುದು ಸರ್ಕಾರದ ಮೊದಲ ಆದ್ಯತೆ. ಬೇರೆಯವರಿಗೆ ಸಹಾಯ ಮಾಡುವುದು ತಪ್ಪಲ್ಲ, ಆದರೆ ಸ್ವಂತ ಜನರನ್ನು ಕಡೆಗಣಿಸಿ ತಾರತಮ್ಯ ಮಾಡುವುದು ಸರಿಯಾದ ಬೆಳವಣಿಗೆಯಲ್ಲ' ಎಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ರಾಷ್ಟ್ರ ನಾಯಕರ ಮಾತಿಗೆ ಮಣಿದು ಸ್ವಂತ ಜನರಿಗೆ ಅನ್ಯಾಯ ಮಾಡದಿರಿ

ಕೇರಳ ಮುಖ್ಯಮಂತ್ರಿಗಳ ಟ್ವೀಟ್ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತವಿರುತ್ತದೆ ಮತ್ತು ಸ್ಥಳೀಯ ನಾಯಕರು ಹಿರಿಯರ ಆದೇಶ ಪಾಲಿಸುವುದು ಸಹಜ. ಆದರೆ, ರಾಷ್ಟ್ರ ನಾಯಕರು ಹೇಳಿದ ತಕ್ಷಣ ನಮ್ಮವರನ್ನು ಕಡೆಗಣಿಸಬೇಕು ಎಂದರ್ಥವಲ್ಲ. ಇಲ್ಲಿನ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ನಮ್ಮಲ್ಲಿನ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಅನ್ಯಾಯದ ನಡೆಯನ್ನು ಯಾರೂ ಒಪ್ಪಲಾರರು ಎಂದರು.

ಹೊಸ ವರ್ಷದ ಆಚರಣೆ: ಯುವ ಸಮೂಹಕ್ಕೆ ಶ್ರೀಗಳ ಸಂದೇಶವೇನು?

ಇಂದು ಮಧ್ಯರಾತ್ರಿಯಿಂದ ಪ್ರಾರಂಭವಾಗುವ 2026ರ ಹೊಸ ವರ್ಷಾಚರಣೆಯ ಬಗ್ಗೆ ಮಾತನಾಡಿದ ಶ್ರೀಗಳು, ಯುವಜನತೆಗೆ ಎಚ್ಚರಿಕೆ ನೀಡಿದರು. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷ ಬದಲಾಗುತ್ತಿದೆ, ಆದರೆ ಭಾರತೀಯ ಪರಂಪರೆಯಲ್ಲಿ ಚೈತ್ರ ಮಾಸದ ಯುಗಾದಿಯೇ ನಿಜವಾದ ಹೊಸ ವರ್ಷ. ಹೊಸ ವರ್ಷದ ಸಂಭ್ರಮದ ಹೆಸರಲ್ಲಿ ಕುಡಿಯುವುದು, ಕುಪ್ಪಳಿಸುವುದು, ಗಲಾಟೆ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಇಂತಹ ದುರಾಚರಣೆಗಳ ಬದಲು ಸದಾಚರಣೆ, ಸದ್ಗುಣಗಳ ಮೂಲಕ ನಯವಾಗಿ ವರ್ಷವನ್ನು ಸ್ವಾಗತಿಸಿ. ಎಲ್ಲ ಭಾರತೀಯರು ಯುಗಾದಿಯನ್ನೇ ಹೊಸ ವರ್ಷವನ್ನಾಗಿ ಆಚರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಧರ್ಮ ಇಬ್ಬಾಗ ಮಾಡುವ ಪ್ರಯತ್ನ ಬೇಡ, ಬೀದಿ ರಂಪಾಟ ನಿಲ್ಲಿಸಿ

ಲಿಂಗಾಯತ ಸ್ವಾಮೀಜಿಗಳ ವಿರುದ್ಧದ ಅವಾಚ್ಯ ಪದ ಬಳಕೆ ಹಾಗೂ ಕನ್ಹೇರಿ ಶ್ರೀಗಳ ವಿಜಯಪುರ ಪ್ರವೇಶ ನಿರ್ಬಂಧದಂತಹ ಬೆಳವಣಿಗೆಗಳ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಶ್ರೀಗಳು, ವೀರಶೈವ ಲಿಂಗಾಯತ ಹೋರಾಟದ ಹಾದಿ ತಪ್ಪಿ ಇಂತಹ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ. ಮಠಾಧೀಶರ ಮುಖ್ಯ ಉದ್ದೇಶ ಸಮಾಜದ ಹಿತ ಮತ್ತು ಮನಶಾಂತಿ ನೀಡುವುದೇ ಹೊರತು ಧರ್ಮವನ್ನು ಇಬ್ಬಾಗ ಮಾಡುವುದಲ್ಲ. ನಮ್ಮೊಳಗಿನ ಸಮಸ್ಯೆಗಳನ್ನು ಬೀದಿಯಲ್ಲಿ ರಂಪಾಟ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ. ಎಲ್ಲರೂ ಒಗ್ಗಟ್ಟಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.