ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಹಳೇ ವೈಷಮ್ಯ ಹಾಗೂ ಅಂತರ್ಜಾತಿ ವಿವಾಹದ ವಿಚಾರವಾಗಿ ಉಮೇಶ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ದಂಪತಿಗಳು ಇದೀಗ ಪೊಲೀಸರಿಗೆ ಶರಣಾಗಿದ್ದಾರೆ.
ಚಾಮರಾಜನಗರ (ಡಿ.31): ಹಳೇ ವೈಷಮ್ಯ ಹಾಗೂ ಮಗನ ಅಂತರ್ಜಾತಿ ವಿವಾಹದ ವಿಚಾರವಾಗಿ ನಡೆದ ಗಲಾಟೆ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ದಂಪತಿಗಳು ಈಗ ಪೊಲೀಸರ ಮುಂದೆ ಶರಣಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದದೊಡ್ಡಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿತ್ತು.
ಘಟನೆಯ ಹಿನ್ನೆಲೆ
ಕೊಲೆಯಾದ ವ್ಯಕ್ತಿಯನ್ನು ಉಮೇಶ್ ಎಂದು ಗುರುತಿಸಲಾಗಿದೆ. ಆರೋಪಿ ಸ್ವಾಮಿ ಎಂಬುವವರ ಮಗನಿಗೆ ಬೇರೆ ಜಾತಿಯ ಯುವತಿಯೊಂದಿಗೆ ವಿವಾಹ ಮಾಡಿಸಲು ಉಮೇಶ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಈ ವಿಚಾರ ಸ್ವಾಮಿ ಕುಟುಂಬಕ್ಕೆ ತೀವ್ರ ಅಸಮಾಧಾನ ತಂದಿತ್ತು. ಇದೇ ಕಾರಣಕ್ಕೆ ಉಮೇಶ್ ಹಾಗೂ ಸ್ವಾಮಿ ಕುಟುಂಬದ ನಡುವೆ ಹಳೇ ವೈಷಮ್ಯ ಬೆಳೆದಿತ್ತು.
ನಿಂದನೆಯೇ ಹತ್ಯೆಗೆ ಪ್ರೇರಣೆ
ಆರೋಪಿ ಸ್ವಾಮಿ ನೀಡಿರುವ ಹೇಳಿಕೆಯ ಪ್ರಕಾರ, ಉಮೇಶ್ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಸ್ವಾಮಿಯ ಮನೆಯ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಮಗನ ಮದುವೆಯ ವಿಚಾರವಾಗಿ ಪದೇ ಪದೇ ಗಲಾಟೆ ಮಾಡುತ್ತಿದ್ದರು. ಘಟನೆಯ ದಿನವೂ ಇಬ್ಬರ ನಡುವೆ ಜೋರಾಗಿ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಸ್ವಾಮಿ ಹಾಗೂ ಆತನ ಪತ್ನಿ ನಾಗಮ್ಮ ಸೇರಿ ಮಚ್ಚಿನಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಠಾಣೆಗೆ ಬಂದು ಶರಣಾದ ದಂಪತಿ
ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಸ್ವಾಮಿ ಮತ್ತು ನಾಗಮ್ಮ, ಪೊಲೀಸರ ಬಲೆಗೆ ಬೀಳುವ ಭೀತಿಯಿಂದ ತಾವಾಗಿಯೇ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


