ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಬೇಕೆಂಬ ಹೈಕೋರ್ಟ್‌ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಿದೆ. ಪರೀಕ್ಷಾ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ವ್ಯವಸ್ಥೆ ಸುಧಾರಣಾ ಕ್ರಮವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.18): ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕಗಳ ನೀಡಲು ಸೂಚಿಸಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಕುರಿತು ರಾಜ್ಯ ಸರ್ಕಾರವು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಅಥವಾ ಮಂಗಳವಾರ ನ್ಯಾಯಮೂರ್ತಿ ಇ.ಎಸ್.‌ಇಂದಿರೇಶ್ ಅವರ ಪೀಠಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ಎನ್ ಎಸ್ ಕ್ಯೂ ಎಫ್ ವಿಷಯಗಳಿಗೆ ಅಂಕದ ಬದಲು ಗ್ರೇಡ್ ನೀಡುವುದಾಗಿ ಸಚಿವ ಮಧು ಬಂಗಾರಪ್ಪ ಪರೀಕ್ಷೆ ನಡೆಯುತ್ತಿದ್ದ ಸಂದರ್ಭ (ಮಾ.28)ದಲ್ಲಿ ಪ್ರಕಟಿಸಿದ್ದರು. ಆ ಕ್ರಮ‌ ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್, ಉಡುಪಿಯ ಅನುಷಾ ಮತ್ತು ಸುದೀಕ್ಷಾ ಅವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಏ.15ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠ, 2025-26ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ನಿಯಮದಂತೆ ಮೌಲ್ಯಮಾಪನ ನಡೆಸಬೇಕು. ಹಿಂದಿ ಸೇರಿ ತೃತೀಯ ಭಾಷೆಗಳ ವಿಷಯಗಳಿಗೆ ಗ್ರೇಡ್ ಬದಲಾಗಿ ಅಂಕ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಅರ್ಜಿ ಇತ್ಯರ್ಥ ಮಾಡಿತ್ತು.‌ ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಹೈ ಕೋರ್ಟ್ ಗೆ ಸರ್ಕಾರವು ಶುಕ್ರವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.

ಅರ್ಜಿಯ ವಿವರ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ ಇಎಬಿ) ನಿಯಮಗಳಿಗೆ ತಿದ್ದುಪಡಿ ತರಲು ಈಗಾಗಲೇ ಕರಡು ಅಧಿಸೂಚನೆಯನ್ನು ಏ.10ರಂದು ರಾಜ್ಯ ಸರ್ಕಾರ ತನ್ನ ವಿಶೇಷ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಈ ಅಂಶವನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತರದೇ ಆದೇಶ ಪಡೆದುಕೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿ ಕೆಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಈಗಾಗಲೇ ವಜಾಗೊಳಿಸಿ, ಆ ಅರ್ಜಿದಾರರಿಗೆ 1 ಲಕ್ಷ ರು. ದಂಡ ವಿಧಿಸಿತ್ತು. ಈ ವಿಷಯವನ್ನು ಪ್ರಸ್ತುತ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತರದೆ ಸತ್ಯಾಂಶ ಮರೆಮಾಚಿದ್ದಾರೆ ಎಂದು ಸರ್ಕಾರ ತನ್ನ ಮರು ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದೆ.

ಹಾಗೆಯೇ, ಮೂಲ ತಕರಾರು ಅರ್ಜಿ ಸಂಬಂಧ‌ ನ್ಯಾಯಾಲಯಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಅವಕಾಶವೇ ಸಿಕ್ಕಿಲ್ಲ. ಅರ್ಜಿದಾರರು ಕರಡು ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ ಎಂದು ಸರ್ಕಾರ ಆಕ್ಷೇಪಿಸಿದೆ. ಹಿಂದಿ ಸೇರಿ ಎಲ್ಲ ತೃತೀಯ ಭಾಷೆ ಮತ್ತು ಎನ್ ಎಸ್ ಕ್ಯೂ ಎಫ್ ವಿಷಯಗಳಲ್ಲಿ 80ಕ್ಕಿಂತ ಅಧಿಕ ಅಂಕ ಪಡೆದರೆ ಎ ಶ್ರೇಣಿ, 50ರಿಂದ 79 ಅಂಕ ಪಡೆದರೆ ಬಿ ಶ್ರೇಣಿ, 49 ಕ್ಕಿಂತ ಕಡಿಮೆ ಅಂಕ ಪಡೆದರೆ ಸಿ ಶ್ರೇಣಿ ಎಂದು ಗ್ರೇಡ್ ನೀಡಲಾಗುತ್ತದೆ. ಆದರೆ, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಅರ್ಜಿಯಲ್ಲಿ ಸರ್ಕಾರ ವಿವರಿಸಿದೆ.

ಅಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ಸಮಾನ ಅವಕಾಶ ಕಲ್ಪಿಸಲು ಹಾಗೂ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ಉದ್ದೇಶಿಸಲಾಗಿದೆ. ಅಂಕದ ಬದಲು ಗ್ರೇಡ್ ನೀಡುವುದು ಸುಧಾರಣಾ ಕ್ರಮವಾಗಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ಸರ್ಕಾರದ ನಡೆಯಿಂದ ತೃತೀಯ ಭಾಷೆ ತಿರಸ್ಕಾರಕ್ಕೆ ಒಳಗಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಆದ್ದರಿಂದ ಏ.15ರಂದು ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಸರ್ಕಾರ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದೆ.