2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹಾಲಿ ಇರುವ ಅಂಕ ಪದ್ಧತಿಯನ್ನೇ ಮುಂದುವರಿಸಲು ಆದೇಶಿಸಿದೆ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲು ಗ್ರೇಡ್ ನೀಡಲು ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ. 2025–2026ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಚಿಕ್ಕಮಗಳೂರು ಮೂಲದ ಸಹನಾ ಆರ್. ನಾಯ್ಕ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಹಾಲಿ ಜಾರಿಯಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪರಿಗಣಿಸಿ, ಈ ಶೈಕ್ಷಣಿಕ ವರ್ಷಕ್ಕೆ ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರದೇ, ಹಿಂದಿನಂತೆ ಅಂಕಗಳನ್ನೇ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಹಿಂದಿ ಸೇರಿ ತೃತೀಯ ಭಾಷೆಗೆ ಅಂಕ ರದ್ದುಪಡಿಸಿದ್ದ ಸರ್ಕಾರ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆರ್.ವಿ. ನಾಯ್ಕ್ ವಾದ ಮಂಡಿಸಿ, 2026ರ ಮಾರ್ಚ್ 28ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಾಗಿ ಘೋಷಣೆ ಮಾಡಿರುವುದನ್ನು ಉಲ್ಲೇಖಿಸಿದರು. ಆದರೆ, ಅದಕ್ಕೂ ಮುನ್ನವೇ ಕೆಎಸ್‌ಇಎಬಿ 2024ರ ಅಕ್ಟೋಬರ್ 18 ಮತ್ತು 2025ರ ಅಕ್ಟೋಬರ್ 28ರಂದು ಹೊರಡಿಸಿದ್ದ ಸುತ್ತೋಲೆಗಳಲ್ಲಿ ತೃತೀಯ ಭಾಷಾ ವಿಷಯಗಳಿಗೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಿದ್ದು, ಅದರಲ್ಲಿ 80 ಅಂಕಗಳನ್ನು ಲಿಖಿತ ಪರೀಕ್ಷೆಗೆ ಮತ್ತು 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿತ್ತು ಎಂದು ವಿವರಿಸಿದರು.
ಇದರ ನಡುವೆಯೇ ಪರೀಕ್ಷೆ ನಡೆಯುವ ಅಂತಿಮ ಹಂತದಲ್ಲಿ ಅಂಕಗಳ ಬದಲು ಗ್ರೇಡ್ ನೀಡುವ ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳಿಗೆ ಅನ್ಯಾಯಕಾರಿಯಾಗುತ್ತದೆ ಎಂದು ವಾದಿಸಿದರು. ಜೊತೆಗೆ, ಯುಪಿಎಸ್‌ಸಿ ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ಅದರ ಅಧೀನ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳಲ್ಲಿ ಗ್ರೇಡಿಂಗ್ ವ್ಯವಸ್ಥೆಯನ್ನು ಪರಿಗಣಿಸುವುದಿಲ್ಲ; ಕೇವಲ ಅಂಕಗಳನ್ನಷ್ಟೇ ಮಾನ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ತೃತೀಯ ಭಾಷಾ ವಿಷಯಗಳಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ಬಂದರೆ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಉದ್ಯೋಗಾವಕಾಶಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಂಕಗಳ ಬದಲಿಗೆ ಗ್ರೇಡ್ ಬೇಡ: ಸರ್ಕಾರಕ್ಕೆ ಸೂಚನೆ
ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತೃತೀಯ ಭಾಷಾ ವಿಷಯಗಳಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಅಥವಾ ಸುತ್ತೋಲೆ ಹೊರಡಿಸಿರುವುದೇ ಎಂಬುದಾಗಿ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಸದ್ಯ ಕರಡು ಅಧಿಸೂಚನೆ ಮಾತ್ರ ಹೊರಡಿಸಲಾಗಿದೆ, ಅಂತಿಮ ನಿರ್ಧಾರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸರ್ಕಾರದಿಂದ ಪಡೆದು ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಇಂದಿರೇಶ್ ಅವರು, ಹಾಲಿ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನೇ ಅನುಸರಿಸಿ 2025–2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳನ್ನೇ ನೀಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೆಎಸ್‌ಇಎಬಿಗೆ ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದರು.
ಇದಲ್ಲದೆ, ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಕುರಿತು ಸಚಿವರು ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಏಪ್ರಿಲ್ 10ರಂದು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಸಂದರ್ಭದಲ್ಲಿ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರದ ಗ್ರೇಡಿಂಗ್ ಯೋಜನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಕ ಪದ್ಧತಿಯನ್ನೇ ಮುಂದುವರಿಸುವಂತೆ ನ್ಯಾಯಾಲಯ ಸ್ಪಷ್ಟ ಸಂದೇಶ ನೀಡಿದಂತಾಗಿದೆ.


