ದಕ್ಷ, ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿ ಚೈತನ್ಯಗೆ ರಾಜ್ಯ ಸರ್ಕಾರ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದೆ. ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ವಿದ್ಯಾರ್ಹತೆಗೆ ಅನುಗುಣ ಸಚಿವಾಲಯ ಸೇವೆಗೆ ನೇಮಕ ಮಾಡಲಾಗುತ್ತದೆ.
ಬೆಂಗಳೂರು (ಜ.03): ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಆಸರೆಯಾಗಿದೆ. ಮಹಾಂತೇಶ್ ಅವರ ಪುತ್ರಿ ಚೈತನ್ಯ ಮಹಾಂತೇಶ್ ಬೀಳಗಿ ಅವರಿಗೆ ಸರ್ಕಾರಿ ನೌಕರಿ ನೀಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ಪ್ರಕರಣವನ್ನು ಒಂದು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿರುವ ಸರ್ಕಾರ, ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಗೆ ಅನುಕಂಪದ ಆಧಾರದ ಮೇಲೆ ನೇಮಕ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಸೇವೆಗೆ ಅವರ ಮಗಳನ್ನು ನೇಮಕ ಮಾಡಿಕೊಂಡು ಸರ್ಕಾರಿ ನೌಕರಿ ನೀಡುವುದಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಈ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಶೀಘ್ರವೇ ಈ ಕುರಿತು ವಿಶೇಷ ಪ್ರಕರಣ ಅಡಿಯಲ್ಲಿ ನೇಮಕ ಪ್ರಕ್ರಿಯೆಯನ್ನು ಸರ್ಕಾರದಿಂದ ಕೈಗೊಳ್ಳಲಾಗುತ್ತದೆ.
ಬಡತನದಿಂದ ಐಎಎಸ್ ಶಿಖರದವರೆಗೆ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೀಳಗಿ ಗ್ರಾಮದವರಾದ ಮಹಾಂತೇಶ್ ಅವರು ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದವರು. ಅವರ ತಾಯಿ ರೊಟ್ಟಿಯನ್ನು ಮಾರಾಟ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಇಂತಹ ಕಡು ಬಡತನದ ನಡುವೆಯೂ ಛಲ ಬಿಡದೆ ಓದಿದ ಇವರು, ಕೆಎಎಸ್ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿ ನಂತರ ಐಎಎಸ್ ದರ್ಜೆಗೆ ಏರಿದರು. ಇವರ ಸಾಧನೆಯ ಹಾದಿ ಸಾವಿರಾರು ಗ್ರಾಮೀಣ ಸ್ಪರ್ಧಾರ್ಥಿಗಳಿಗೆ ಇಂದಿಗೂ ಸ್ಪೂರ್ತಿಯಾಗಿದೆ.
ಶಾರುಖ್ ಖಾನ್ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ
ದಕ್ಷ ಸೇವೆ ಮತ್ತು ಸಾಧನೆ
ಮಹಾಂತೇಶ್ ಬೀಳಗಿ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ದಾವಣಗೆರೆ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಜನಪರ ಕೆಲಸಗಳು ಇಂದಿಗೂ ಆ ಭಾಗದ ಜನರ ನೆನಪಿನಲ್ಲಿವೆ. ಸ್ಮಾರ್ಟ್ ಸಿಟಿ ಯೋಜನೆ ಜಾರಿ ಹಾಗೂ ಕೋವಿಡ್ ಸಂದರ್ಭದಲ್ಲಿ ಅವರು ತೋರಿದ ದಕ್ಷತೆ ಶ್ಲಾಘನೀಯವಾಗಿತ್ತು. ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪ್ರಮುಖವಾಗಿ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದರು.
ಸರಳ ಸಜ್ಜನಿಕೆಯ ಅಧಿಕಾರಿ ಎಂದೇ ಹೆಸರಾಗಿದ್ದ ಮಹಾಂತೇಶ್ ಅವರು ಇತ್ತೀಚೆಗೆ ವಿಜಯಪುರದ ಬಳಿ ನಡೆದ ಕಾರು ಅಪಘಾತದಲ್ಲಿ ನಿಧನರಾಗಿದ್ದು, ಇಡೀ ಆಡಳಿತ ಯಂತ್ರ ಹಾಗೂ ಜಿಲ್ಲಾಧಿಕಾರಿಗಳ ವಲಯದಲ್ಲಿ ಶೋಕ ಮಡುಗಟ್ಟಿತ್ತು. ಕುಟುಂಬದ ಆಧಾರಸ್ತಂಭವಾಗಿದ್ದ ಇವರ ಅಗಲಿಕೆಯಿಂದ ಕಂಗಾಲಾಗಿದ್ದ ಕುಟುಂಬಕ್ಕೆ ಈಗ ಸರ್ಕಾರವು ನೈತಿಕ ಬೆಂಬಲ ನೀಡಿದೆ. ಅವರ ಪುತ್ರಿ ಚೈತನ್ಯ ಅವರ ದಾಖಲೆಗಳನ್ನು ಪರಿಶೀಲಿಸಿ, ಶೀಘ್ರವೇ ನೇಮಕಾತಿ ಆದೇಶ ಹೊರಡಿಸಲು ಸರ್ಕಾರ ಸಜ್ಜಾಗಿದೆ.


