ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದೆ. ಈ ಸೌಲಭ್ಯವು ಸೆಪ್ಟೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಮಹತ್ವದ ರಿಯಾಯಿತಿ ಘೋಷಿಸಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿಯಾಗಿರುವ ದಂಡ ಮೊತ್ತದ ಮೇಲೆ 50% ರಿಯಾಯಿತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ತೀರ್ಮಾನದಿಂದ ಲಕ್ಷಾಂತರ ವಾಹನಚಾಲಕರಿಗೆ ಖುಷಿಯ ಸುದ್ದಿ ಸಿಕ್ಕಿದಂತಾಗಿದೆ.

ನಾಳೆಯಿಂದಲೇ ರಿಯಾಯಿತಿ ಜಾರಿಗೆ

ಸರ್ಕಾರದ ಆದೇಶದಂತೆ ನಾಳೆಯಿಂದಲೇ ಅಂದರೆ ಸೆಪ್ಟೆಂಬರ್ 21ದಿಂದಲೇ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದೆ. ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು.

ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆ

ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದ ಕಾರಣ, ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರ್ಯಾರು ಲಾಭ ಪಡೆಯಬಹುದು?

  • ರಾಜ್ಯದ ಯಾವುದೇ ಭಾಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದಂಡ ಬಾಕಿ ಇಟ್ಟಿರುವ ವಾಹನಚಾಲಕರು
  • ಆನ್‌ಲೈನ್ (echallan), ಆಪ್ ಮೂಲಕ ಅಥವಾ RTO/ ಟ್ರಾಫಿಕ್ ಪೊಲೀಸ್ ಕಚೇರಿಯಲ್ಲಿ ಪಾವತಿಸಬಹುದಾದ ದಂಡ ಮೊತ್ತಗಳು
  • ಅಪರಾಧಿ ಪ್ರಕರಣಗಳಿಗೆ ಸಂಬಂಧಿಸಿದ ದಂಡಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯಿಸುವುದಿಲ್ಲ

ರಿಯಾಯಿತಿ ಹೇಗೆ ಲೆಕ್ಕಿಸಲಾಗುತ್ತದೆ?

ಒಬ್ಬ ಚಾಲಕರಿಗೆ ₹2,000 ದಂಡ ಬಾಕಿ ಇದೆ ಎಂದರೆ ಅವರಿಗೆ 50% ರಿಯಾಯಿತಿ ಅನ್ವಯಿಸಿ ಕೇವಲ ₹1,000 ಪಾವತಿಸಿದರೆ ಕೇಸ್ ಕ್ಲಿಯರ್ ಆಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಟ್ರಾಫಿಕ್ ಇ-ಚಲಾನ್‌ಗಳ ಬಾಕಿ ಪ್ರಕರಣಗಳು ಹೆಚ್ಚಾಗಿದ್ದವು. ದಂಡದ ಮೊತ್ತ ಹೆಚ್ಚಿರುವುದರಿಂದ ನಾಗರಿಕರು ಪಾವತಿಸಲು ಹಿಂಜರಿದಿದ್ದರು. ಈಗಿನ ರಿಯಾಯಿತಿ ಘೋಷಣೆ ಸಾಮಾನ್ಯ ಚಾಲಕರಿಗೆ ದೊಡ್ಡ ಸೌಲಭ್ಯ ನೀಡಲಿದೆ.

ಟ್ರಾಫಿಕ್ ಫೈನ್ ಚೆಕ್ ಮಾಡಿಕೊಳ್ಳುವುದು ಹೇಗೆ?

ಸರ್ಕಾರದ ಅಧಿಕೃತ ಕರ್ನಾಟಕ ಒನ್ ಅಥವಾ ಇ-ಚಲನ್ ಪೋರ್ಟಲ್ ವೆಬ್‌ಸೈಟ್‌ಗಳ ಮೂಲಕ ನಿಮ್ಮ ವಾಹನದ ಟ್ರಾಫಿಕ್ ದಂಡವನ್ನು ಪರಿಶೀಲಿ ಪಾವತಿಸಬಹುದು. ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸರ್ಚ್ ಕೊಡಿ. ನಿಮ್ಮ ವಾಹನದ ಮೇಲೆ ಬಾಕಿ ಇರುವ ದಂಡದ ಮೊತ್ತ ಕಾಣಿಸುತ್ತದೆ. ನಿಮ್ಮ ಬಳಿ ಚಲನ್ ಸಂಖ್ಯೆ ಇದ್ದರೆ, ಅದನ್ನು ನೇರವಾಗಿ ನಮೂದಿಸಬಹುದು. ಅಧಿಕೃತ ವೆಬ್‌ತಾಣ ಇಲ್ಲಿದೆ: https://kspapp.ksp.gov.in/ksp/api/traffic-challan/home