2024-25ನೇ ಸಾಲಿನಲ್ಲಿ ವಿವಿಧ ಸಮುದಾಯ ಮತ್ತು ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಖೋತಾ ಮಾಡಲಾಗಿದೆ. ಅನುದಾನವಿಲ್ಲದೆ ಬಹುತೇಕ ನಿಗಮಗಳು ಸಮುದಾಯಗಳ ಅಭಿವೃದ್ಧಿ ಮಾಡಲಾಗದೆ ಕೈ-ಕೈ ಹಿಸುಕಿಕೊಳ್ಳುತ್ತಿವೆ.
ಬೆಂಗಳೂರು (ಜ.20): 2024-25ನೇ ಸಾಲಿನಲ್ಲಿ ವಿವಿಧ ಸಮುದಾಯ ಹಾಗೂ ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಖೋತಾ ಮಾಡಲಾಗಿದೆ. ಅನುದಾನವಿಲ್ಲದೇ ಬಹುತೇಕ ಅಭಿವೃದ್ಧಿ ನಿಗಮಗಳು ಸಮುದಾಯಗಳ ಅಭಿವೃದ್ಧಿ ಮಾಡಲಾಗದೇ ಕೈ-ಕೈ ಹಿಸುಕಿಕೊಳ್ಳುತ್ತಿವೆ. ಇನ್ನು ಸರ್ಕಾರದಿಂದ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದರೂ ಅನುದಾನವಿಲ್ಲದೇ ಕೆಲಸ ಮಾಡುವುದಕ್ಕೆ ಸಾಧ್ಯವಾಗದೇ ಬರಿಗೈಯಲ್ಲಿ ಕೂರುವಂತಾಗಿದೆ.
ಹೌದು, ರಾಜ್ಯದಲ್ಲಿ ಹಲವು ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನ ಬಿಡುಗಡೆಯೇ ಇಲ್ಲ. ಕೆಲವೇ ನಿಗಮಗಳಿಗೆ ಮಾತ್ರ ಕಡಿಮೆ ಅನುದಾನ ಬಿಡುಗಡೆ ಆಗಿದೆ. ಈ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನುದಾನ ಡಿಸೆಂಬರ್ ಅಂತ್ಯದವರೆಗೆ ಕಾಯುತ್ತಾ ಕುಳಿತರೂ ಬಿಡುಗಡೆ ಆಗಿಲ್ಲ. ವಿವಿಧ ನಿಗಮಗಳಿಗೆ ಅನುದಾನ ನೀಡದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುದಾನ ಖೋತಾ ಆದ ಬಗ್ಗೆ ವರದಿ ಸಲ್ಲಿಕೆ ಮಾಡಲಾಗಿದೆ.
ಪ್ರಮುಖ ನಿಗಮಗಳಿಗೆ ಅನುದಾನವೇ ಬಂದಿಲ್ಲ..
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಬಿಲ್ಲವ - ಈಡಿಗ ಸಮುದಾಯದ ವಿಶೇಷ ಕೋಶ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮಗಳಿಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನುದಾನ ಹಂಚಿಕೆ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಅನುದಾನ ಕೊಡದ ಹಿನ್ನೆಲೆಯಲ್ಲಿ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸರ್ಕಾರಿ ಖಜಾನೆಯಲ್ಲಿ ಕಾಸಿಲ್ವಾ?; ತಾನೇ ಘೋಷಿಸಿದ ಅನುದಾನದಲ್ಲಿ ಭಾರೀ ಬಾಕಿ ಉಳಿಸಿಕೊಂಡ ಸರ್ಕಾರ!
ಇದೀಗ ಜನವರಿ ತಿಂಗಳು ಆರಂಭವಾಗಿದ್ದು, ಇದೀಗ ಅನುದಾನವನ್ನು ನಿಗಮಗಳಿಗೆ ಹಂಚಿಕೆ ಮಾಡಿದರೂ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟವಾಗಲಿದೆ. ಆದ್ದರಿಂದ ಸರ್ಕಾರ ಬಿಡುಗಡೆ ಮಾಡಿದ ಹಣ ಖರ್ಚು ಆಗಿಲ್ಲವೆಂದು ಪುನಃ ಅದನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ. ಇನ್ನು ಕೆಲವು ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅತ್ಯಲ್ಪ ಅನುದಾನ ಹಂಚಿಕೆ ಆಗಿದೆ. ಅಲ್ಪ ಅನುದಾನ ಹಂಚಿಕೆಯಾದ ನಿಗಮಗಳ ವಿವರ ಇಲ್ಲಿದೆ ನೋಡಿ..
| ಅಭಿವೃದ್ಧಿ ನಿಗಮಗಳ ವಿವರ | ಘೋಷಣೆ ಮಾಡಿದ ಅನುದಾನ ರೂ.ಗಳಲ್ಲಿ | ಬಿಡುಗಡೆಯಾದ ಹಣ ರೂ.ಗಳಲ್ಲಿ |
| ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮ | 28.78 ಕೋಟಿ | 10.37 ಕೋಟಿ |
| ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ | 5.01 ಕೋಟಿ | 1.25 ಕೋಟಿ |
| ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಕಲ್ಯಾಣ | 40 ಕೋಟಿ | 19.28 ಕೋಟಿ |
| ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಅಭಿವೃದ್ಧಿ | 191 ಕೋಟಿ | 70.66 ಕೋಟಿ |
| ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ | 60 ಕೋಟಿ | 15 ಕೋಟಿ |
| ಭೋವಿ ಅಭಿವೃದ್ಧಿ ನಿಗಮ | 55 ಕೋಟಿ | 13.75 ಕೋಟಿ |
| ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ | 50 ಕೋಟಿ | 12.50 ಕೋಟಿ |
| ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ | 25 ಕೋಟಿ | 6.25 ಕೋಟಿ |
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ತಲಾ 25 ಕೋಟಿ, ವಿಪಕ್ಷ ಶಾಸಕರಿಗೆ 10 ಕೋಟಿ ರೂ. ಅನುದಾನ ಹಂಚಿಕೆ; ಪರಮೇಶ್ವರ
| ಈವರೆಗೆ ಬಿಡಿಗಾಸೂ ಅನುದಾನ ಸಿಗದ ಅಭಿವೃದ್ಧಿ ನಿಗಮಗಳು | ಘೋಷಣೆ ರೂ.ಗಳಲ್ಲಿ | ಬಿಡುಗಡೆ ರೂ.ಗಳಲ್ಲಿ |
| ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ | 100 ಕೋಟಿ | 00 |
| ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ | 100 ಕೋಟಿ | 00 |
| ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | 60 ಕೋಟಿ | 00 |
| ವಿಶ್ವಕರ್ಮ ಅಭಿವೃದ್ಧಿ ನಿಗಮ | 13 ಕೋಟಿ | 00 |
| ಉಪ್ಪಾರ ಅಭಿವೃದ್ಧಿ ನಿಗಮ | 8 ಕೋಟಿ | 00 |
| ಈಡಿಗ - ಬಿಲ್ಲವ ಸಮಗ್ರ ಅಭಿವೃದ್ಧಿ ವಿಶೇಷ ಕೋಶ | 10 ಕೋಟಿ | 00 |
| ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ | 5 ಕೋಟಿ | 00 |
