ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಪಾಲರು ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಓವರ್‌ಲೋಡ್ ಆದ ಲಿಫ್ಟ್‌ನಿಂದಾಗಿ ಈ ಘಟನೆ ಸಂಭವಿಸಿದ್ದು, ಭದ್ರತಾ ಲೋಪದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೈಸೂರು (ಮೇ.31): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ 'ದಿ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್' ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಕರ್ನಾಟಕ ರಾಜ್ಯಪಾಲರು ಲಿಫ್ಟ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಪಾಲರು ಕಾರ್ಯಕ್ರಮಕ್ಕೆ ತೆರಳಲು ಲಿಫ್ಟ್ ಬಳಸಿದರು. ಈ ವೇಳೆ 6 ಮಂದಿಯ ಸಾಮರ್ಥ್ಯದ ಲಿಫ್ಟ್‌ನಲ್ಲಿ 10 ಜನರು ಪ್ರಯಾಣಿಸಿದ್ದರಿಂದ ಓವರ್‌ಲೋಡ್ ಆಗಿ ಲಿಫ್ಟ್ ಕೆಟ್ಟು ಅರ್ಧದಲ್ಲೇ ನಿಂತಿತು. ಇದರಿಂದ ರಾಜ್ಯಪಾಲರು ಕೆಲಕಾಲ ಲಿಫ್ಟ್‌ನಲ್ಲೇ ಸಿಲುಕಿದ್ದರು. ಆತಂಕಗೊಂಡ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ, ಲಿಫ್ಟ್‌ನಲ್ಲಿದ್ದ ಕೆಲ ಸಿಬ್ಬಂದಿಯನ್ನು ಕೆಳಗಿಳಿಸಿದರು.

ಬಳಿಕ, ಲಿಫ್ಟ್ ಬಳಸದೆ ರಾಜ್ಯಪಾಲರು ನಡೆದುಕೊಂಡೇ ಕಾರ್ಯಕ್ರಮಕ್ಕೆ ತೆರಳಿದರು. ಈ ಘಟನೆಯಿಂದ ಕಾರ್ಯಕ್ರಮದಲ್ಲಿ ಯಾವುದೇ ವಿಘ್ನ ಉಂಟಾಗಿಲ್ಲವಾದರೂ, ಲಿಫ್ಟ್‌ನ ಓವರ್‌ಲೋಡ್ ಸಮಸ್ಯೆ ಭದ್ರತಾ ಲೋಪವನ್ನು ಎತ್ತಿತೋರಿಸಿದೆ.