ಕರ್ನಾಟಕ ಸರ್ಕಾರವು ಡಿ.ರಂದೀಪ್, ತುಳಸಿ ಮದ್ದಿನೇನಿ ಸೇರಿದಂತೆ ಹದಿಮೂರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಹಲವು ಅಧಿಕಾರಿಗಳಿಗೆ ಹೊಸ ಹುದ್ದೆಗಳನ್ನು ನೀಡಲಾಗಿದ್ದು, ಕೆಲವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ.
- ಇಸ್ಕಾಂಗ್ಲಾ ಜಮೀರ್ ಕರ್ನಾಟಕ ಭವನ ಕಾರ್ಯದರ್ಶಿ
- ಮದ್ದಿನೇನಿಗೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆ
ಬೆಂಗಳೂರು (ಜೂ.19): ಡಿ.ರಂದೀಪ್, ತುಳಸಿ ಮದ್ದಿನೇನಿ ಸೇರಿದಂತೆ ಹದಿಮೂರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಸರ್ಕಾರ ಆದೇಶಿಸಿದೆ. ಇನ್ನು ಕೆಲ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ, ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಹುದ್ದೆ ನೀಡಿ ಆದೇಶ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
ಎಂ. ಇಮ್ಕಾಂಗ್ಲಾ ಜಮೀರ್ ಅವರನ್ನು ನವದೆಹಲಿಯ ಕರ್ನಾಟಕ ಭವನದ ಕಾರ್ಯದರ್ಶಿಯಾಗಿ (ಸಮನ್ವಯ) ವರ್ಗಾವಣೆ ಮಾಡಿದ್ದು, ಇದುವರೆಗೆ ಅವರಿದ್ದ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ಹುದ್ದೆಗೆ ಸಮೀರ್ ಶುಕ್ಲಾ ಅವರನ್ನು ನಿಯೋಜಿಸಲಾಗಿದೆ. ಅದೇ ರೀತಿ ತುಳಸಿ ಮದ್ದಿನೇನಿ ಅವರನ್ನು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಗೆ, ಡಿ.ರಂದೀಪ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ಜೊತೆಗೆ ಇದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್) ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
ಕೆ.ಬಿ.ಶಿವಕುಮಾರ್ ಅವರನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ, ಡಾ.ಸತೀಶ ಬಿ.ಸಿ.ಅವರನ್ನು ಕೃಷಿ ಇಲಾಖೆ ಆಯುಕ್ತರಾಗಿ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಂಎಸ್‌ಎಂಇ ನಿರ್ದೇಶಕರಾಗಿ, ಗಜಾನನ ಬಾಲೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ, ರಘುನಂದನ್ ಮೂರ್ತಿ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ರಘುನಂದನ ಮೂರ್ತಿ ಅವರಿಗೆ ಹೆಚ್ಚುವರಿಯಾಗಿ ಖಜಾನೆ ಆಯುಕ್ತ ಹುದ್ದೆ, ಗಜಾನನ ಬಾಲೆ ಅವರಿಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಪ್ರಧಾನ ವ್ಯವಸ್ಥಾಪಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಡಾ.ಪ್ರಸಾದ್ ಎನ್.ವಿ. ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹುದ್ದೆ, ಅಕ್ರಂ ಪಾಷಾ ಅವರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಆರೋಗ್ಯ ನಿರ್ದೇಶನಾಲಯದ ಮಿಷನ್ ಡೈರೆಕ್ಟರ್ ಹುದ್ದೆ, ನಿತಿಶ್ ಕೆ. ಅವರಿಗೆ ಪೌರಾಡಳಿತ ನಿರ್ದೇಶಕ ಸ್ಥಾನ ನೀಡಲಾಗಿದೆ. ನಿತಿಶ್ ಅವರಿಗೆ ಹೆಚ್ಚುವರಿಯಾಗಿ ಜಿಬಿಎ ಶಿಕ್ಷಣ ಮತ್ತು ಆಯೋಗ್ಯ ವಿಭಾಗದ ವಿಶೇಷ ಆಯುಕ್ತ ಹುದ್ದೆ ವಹಿಸಲಾಗಿದೆ. ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ಹುದ್ದೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.


