Asianet Suvarna News Asianet Suvarna News

ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ

ಗೊತ್ತೋ ಗೊತ್ತಿಲ್ಲದೆಯೋ ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ ನೀಡಲು ರಾಜ್ಯದ ಸರಕಾರ ತೀರ್ಮಾನಿಸಿದೆ.

Karnataka government gives final call to surrender wildlife materials after tiger claw pendant case gow
Author
First Published Oct 27, 2023, 2:51 PM IST

ಬೆಂಗಳೂರು (ಅ.27): ಗೊತ್ತೋ ಗೊತ್ತಿಲ್ಲದೆಯೋ ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ ನೀಡಲು ರಾಜ್ಯದ ಸರಕಾರ ತೀರ್ಮಾನಿಸಿದೆ. ಈ ಮೂಲಕ ಹುಲಿ ಉಗುರುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬರಬೇಕಿದೆ.

ಅಕ್ರಮವಾಗಿ ವನ್ಯಜೀವಿಗಳಿಂದ ಉತ್ಪಾದಿತ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವವರಿಗೆ ಕೊನೆಯ ಅವಕಾಶ ನೀಡಲು ತೀರ್ಮಾನಿಸಿದ್ದು, ಪ್ರಾಣಿಗಳ ಚರ್ಮ, ಉಗುರು, ಕೊಂಬು ಸೇರಿದಂತೆ ವನ್ಯಜೀವಿಗೆ ಸಂಬಂಧಿಸಿ ಯಾವುದೇ ವಸ್ತುಗಳು ಮನೆಯಲ್ಲಿದ್ದರೆ ವಸ್ತು ವಾಪಸ್ ಕೊಡಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆದಿದೆ.

ಹುಲಿ ಉಗುರು ಲಾಕೆಟ್‌ ಪ್ರಕರಣ, ವರ್ತೂರು ಸಂತೋಷ್ ಗೆ ಜಾಮೀನು ಮಂಜೂರು

ಈ ಬಗ್ಗೆ ಅಭಿಪ್ರಾಯ ನೀಡಲು ಅಡ್ವೋಕೆಟ್ ಜನರಲ್ ಅವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಂಬಂಧ ಪತ್ರ ಬರೆದಿದ್ದಾರೆ. ಕಾಲವಕಾಶ ನೀಡುವ ಸಂಬಂಧ ಎಜಿ ಅಭಿಪ್ರಾಯದ ಬಳಿಕ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ 2 ತಿಂಗಳ ಕಾಲಾವಕಾಶದೊಳಗೆ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸದಿದ್ರೆ ಮೊಕದ್ದಮೆ ದಾಖಲಾಗಲಿದೆ.

ಕಾಲಾವಕಾಶ ನೀಡಲು ಸಿಎಂ ಸಿದ್ದರಾಮಯ್ಯ ಕೂಡ ಸಹಮತ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲು ಅರಣ್ಯ  ಇಲಾಖೆ ತಿರ್ಮಾನ ತೆಗೆದುಕೊಂಡಿದೆ.

ಹುಲಿ ಉಗುರು ಧರಿಸಿ ಶೋಕಿ ತೋರಿದ ಇಬ್ಬರು ಅರಣ್ಯಾಧಿಕಾರಿಗಳು ಸಸ್ಪೆಂಡ್

ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ಹುಲಿ ಉಗುರು, ವನ್ಯಜೀವಿ ಅಂಗಾಂಗ ವಾಪಸ್ ಮಾಡಲು ಕಾಲಾವಕಾಶ ಕೊಡುವ ತೀರ್ಮಾನ ಆಗಿದೆ. ಮುಖ್ಯಮಂತ್ರಿಗಳ ಜೊತೆಗೂ ಈ ಬಗ್ಗೆ ಚರ್ಚೆ ಆಗಿದೆ. ಅಡ್ಕೊಕೇಟ್ ಜನರಲ್ ಗೆ ಕಾನೂನಿನ ಅಭಿಪ್ರಾಯ ಕೇಳಲಾಗಿದೆ. ಈ ವಿಚಾರದಲ್ಲಿ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡಿಲ್ಲ. ದೂರು ಬಂದ ಬಳಿಕೆ ಸೆಲೆಬ್ರಿಟಿಗಳಿಗೂ ನೋಟಿಸ್ ಕೊಟ್ಟಿದ್ದೇವೆ. 

ವರ್ತೂರು ಸಂತೋಷ್ ಪ್ರಕರಣದಲ್ಲಿ ನಮಗೆ ವಿಚಾರಣೆಗೆ ಸಹಕಾರ ಕೊಟ್ಟಿಲ್ಲ. ನಮ್ಮ ಅಧಿಕಾರಿಗಳು ಹೋದಾಗ ಆರೇಳು ಗಂಟೆ ಕಾದರು ಸಹಕಾರ ಕೊಡಲಿಲ್ಲ. ಹೀಗಾಗಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ಬಂದಾಗ ನೋಟಿಸ್ ಕೊಟ್ಟು ಸರ್ಚ್ ಮಾಡಿದ್ದೇವೆ. ಈ ವಿಚಾರದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಸೆಲೆಬ್ರಿಟಿಗಳು ಧರಿಸಿದ್ದು ನಕಲಿ ಎಂದು ಅಧಿಕಾರಿಗಳು  ಹೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಎಫ್‌ಎಸ್ಎಲ್ ಗೆ ಕಳಿಸಿ ದೃಢಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios