ಕಾಂಗ್ರೆಸ್ FSL ವರದಿ ಒಪ್ಪುವ ಸ್ಥಿತಿಯಲ್ಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು 9 ತಿಂಗಳಾದರೂ 50 ಮೀಟರ್ ರಸ್ತೆಯೂ ಆಗಿಲ್ಲ. ಆದರೆ, ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗಿಳಿದು ಕೆಲಸ ಮಾಡುತ್ತಿದ್ದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ರಾಜಾರೋಷವಾಗಿ ಬಾಂಬ್ ಇಟ್ಟು ಹೋಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹರಿಹಾಯ್ದರು.
ದಾವಣಗೆರೆ (ಮಾ.4): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು 9 ತಿಂಗಳಾದರೂ 50 ಮೀಟರ್ ರಸ್ತೆಯೂ ಆಗಿಲ್ಲ. ಆದರೆ, ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗಿಳಿದು ಕೆಲಸ ಮಾಡುತ್ತಿದ್ದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ರಾಜಾರೋಷವಾಗಿ ಬಾಂಬ್ ಇಟ್ಟು ಹೋಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹರಿಹಾಯ್ದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ದಾವಣಗೆರೆ ಕ್ಷೇತ್ರದ ಕುರಿತಂತೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮೇಶ್ವರಂ ಕೆಫೆಯ ಸ್ಫೋಟ ಪ್ರಕರಣದ ಆರೋಪಿಗೆ ಬಂಧಿಸುವ ಬದಲು, ಕಾಂಗ್ರೆಸ್ ಪಕ್ಷದ ಅಧಿಕಾರಸ್ಥರು ಕೇವಲ ಹೇಳಿಕೆಗಳ ನೀಡುತ್ತಿದ್ದಾರೆ. ನಾಡಿನ 7 ಕೋಟಿ ಜನರ ಹೃದಯವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಇದರಿಂದ ಇಡೀ ರಾಜ್ಯದ ಜನತೆಗೆ ನೋವುಂಟಾಗಿದೆ. ಇತಿಹಾಸದಲ್ಲಿ ಆಗದಿರುವ ಕೃತ್ಯವು ವಿಧಾನಸೌಧದಲ್ಲಾಗಿದೆ. ವಿಧಿವಿಜ್ಞಾನ ಕೇಂದ್ರ (ಎಫ್‌ಎಸ್‌ಎಲ್) ದಿಂದ ಮಾಹಿತಿ ಬಂದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ ಎಂದು ಕಿಡಿಕಾರಿದರು.
ಪಾಕ್ ಪರ ಘೋಷಣೆ ಮಾಡಿದ್ದನ್ನು ಪ್ರಶ್ನಿಸಿದ ಮಾಧ್ಯಮದವರನ್ನೇ ಬೆದರಿಸುವ ಕೆಲಸ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾಡಿದ್ದಾರೆ. ಎಫ್ಎಸ್ಎಲ್ ವರದಿ ಇದ್ದರೂ ಎಷ್ಟು ಜನರನ್ನು ಬಂಧಿಸಿದ್ದೀರಿ? ಪಾಕ್ ಪರ ಘೋಷಣೆ ವಿಚಾರ ಬಿಟ್ಟು, ಉಳಿದಿದ್ದಕ್ಕೆಲ್ಲಾ ಉತ್ತರ ಕೊಡುತ್ತೇನೆಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದರೂ ಸಿದ್ದರಾಮಯ್ಯ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದು ಕುಟುಕಿದರು.
ಅಸಹಾಯಕತೆ ತೋಡಿಕೊಳ್ಳುವ ಇಂತಹ ಕಾಂಗ್ರೆಸ್ಸಿನವರು ಹೇಗೆ ದೇಶದ ಜನರ ಕಾಪಾಡುತ್ತಾರೆ? ಮಾತೆತ್ತಿದರೆ ಸಂವಿಧಾನದ ರಕ್ಷಣೆಯೆನ್ನುತ್ತಾರೆ. ತುರ್ತು ಪರಿಸ್ಥಿತಿ ಹೊರತುಪಡಿಸಿ, ಯಾವತ್ತೂ ಸಂವಿಧಾನಕ್ಕೆ ಧಕ್ಕೆಯಾಗಿಲ್ಲ. ಆಗಿನ ತುರ್ತು ಪರಿಸ್ಥಿತಿ ತಂದವರೇ ಕಾಂಗ್ರೆಸ್‌ನವರು. ಈಗ ಸಂವಿಧಾನಕ್ಕೆ ಧಕ್ಕೆ ಬಂದಿದೆಯೆಂದು ಸಂವಿಧಾನ ಜಾಗೃತಿ ಜಾಥಾ ಮಾಡುತ್ತಾರೆ ಎಂದರು.
ಜನರ ಕಲ್ಯಾಣವಾದರೂ ಸಾಧ್ಯವೇ?
ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರು.ಗೂ ಅಧಿಕ ಹಣವನ್ನು ಕಾಂಗ್ರೆಸ್ ಪಕ್ಷವು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿದ್ದು ನೋವಿನ ಸಂಗತಿ. ಒಲ್ಲದ ಮನಸ್ಸಿನಿಂದಲೇ ಇದನ್ನು ನೀಡಿದೆ ಎಂಬುದಾಗಿ ಸಮಾಜ ಕಲ್ಯಾಣ ಸಚಿವರು ಹೇಳುತ್ತಾರೆ. ಇಂತಹವರಿಂದ ಪರಿಶಿಷ್ಟ ಜಾತಿ-ಪಂಗಡಗಳ ಜನರ ಕಲ್ಯಾಣವಾದರೂ ಸಾಧ್ಯವೇ?ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ
ದಾವಣಗೆರೆ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ತೇವೆ:
ದಾವಣಗೆರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯಾದ್ಯಂತ ಪ್ರತಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರ ಅವಶ್ಯವಿರುವ ಹಿನ್ನೆಲೆಯಲ್ಲಿ ಜನರ ಒಲವು ಬಿಜೆಪಿ ಕಡೆ ಇರುವುದು ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪ್ರತಿ ಕ್ಷೇತ್ರದಂತೆ ಈ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ನಂತರ ದಾವಣಗೆರೆ ಕ್ಷೇತ್ರವನ್ನೂ ಮತ್ತೆ ಗೆದ್ದೇ ಗೆಲ್ಲುತ್ತೇವೆಂಬ ಸಂಪೂರ್ಣ ವಿಶ್ವಾಸ ನಮಗೆ ಇದೆ ಎಂದರು. ಒಂದು ಪಕ್ಷವೆಂದ ಮೇಲೆ ಗುಡುಗು, ಮಿಂಚು ಇದ್ದೇ ಇರುತ್ತದೆ. ಮಳೆ ಬಂದ ಮೇಲೆ ಎಲ್ಲವೂ ಸರಿಯಾಗುತ್ತದೆ. ನಾವೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಪ್ರಾಮಾಣಿಕವಾಗಿ ಅದರ ವರದಿಯನ್ನು ರಾಜ್ಯ ಸಮಿತಿ ಮೂಲಕ ಕೇಂದ್ರಕ್ಕೆ ಕಳಿಸಿ ಕೊಡುತ್ತೇವೆ ಎಂದು ಹೇಳಿದರು. ಹಲವರಿಂದ ಗೋಪ್ಯವಾಗಿ ಅಭಿಪ್ರಾಯ ಸಂಗ್ರಹ
ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ, ದೇಶ ಜೋಡಿಸುವುದು ಬಿಜೆಪಿ ಸಂಸ್ಕೃತಿ: ಕೋಟ ಶ್ರೀನಿವಾಸ ಪೂಜಾರಿ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹದ ಕುರಿತಂತೆ ಕೋರ್ ಕಮಿಟಿ ಸಭೆ ಭಾನುವಾರ ನಡೆಯಿತು. ವಿಪ ವಿಪಕ್ಷ ನಾಯಕ, ಪಕ್ಷದ ಜಿಲ್ಲಾ ವೀಕ್ಷಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರ ಅಭಿಪ್ರಾಯಗಳ ಸಂಗ್ರಹಿಸಲಾಯಿತು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸೇರಿ ಅನೇಕರು ತಮ್ಮ ಗೋಪ್ಯವಾಗಿ ಪಕ್ಷದ ವೀಕ್ಷಕರಿಗೆ ಅಭಿಪ್ರಾಯ ತಿಳಿಸಿದರು.